ದೇಶಪ್ರಮುಖ ಸುದ್ದಿ

ಸ್ವಾಮಿ ವಿವೇಕಾನಂದರ ವಿಚಾರಗಳು ನಮಗೆ ಪ್ರೇರಣೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ,ಜ.12-ಸ್ವಾಮಿ ವಿವೇಕಾನಂದರ ವಿಚಾರಗಳು ಪ್ರೇರಣೆಯಿಂದ ಕೂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸ್ವಾಮಿ ವಿವೇಕಾನಂದರ ಜಯಂತಿ ಹಿನ್ನೆಲೆಯಲ್ಲಿ ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ವರ್ಚುವಲ್​ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆರಂಭದಲ್ಲೇ ರಾಷ್ಟ್ರೀಯ ಯುವ ದಿನಾಚರಣೆಗೆ ಶುಭಕೋರಿದರು. ಬಳಿಕ ಮಾತು ಮುಂದುವರಿಸಿ ಇವತ್ತಿನ ದಿನ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ವಿವೇಕಾನಂದರು ನಮಗೆಲ್ಲ ಪ್ರೇರಣೆಯಾಗಿದ್ದಾರೆ. ಅವರು ಹೇಳಿದಂತೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಎಂದರು.

ಸಂವಿಧಾನದ ರಚನೆಗೆ ಸಾಕ್ಷಿಯಾದ ಸಂಸತ್ತಿನ ಕೇಂದ್ರ ಹಾಲ್​ನಲ್ಲಿ ಯುವ ಸಂಸತ್ ಉತ್ಸವ ನಡೆಯುತ್ತಿರುವುದು ಈ ದಿನದ ಮಹತ್ವವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದು ದೇಶಾದ್ಯಂತ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ.

ಇದಕ್ಕೂ ಮುನ್ನ ಸ್ವಾಮಿ ವಿವೇಕಾನಂದರನ್ನು ಸ್ಮರಿಸಿ ಟ್ವೀಟ್ ಮಾಡಿದ್ದರು. ಈ ಬಾರಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನಮೋ ಆಪ್ ನಲ್ಲಿ ವಿವೇಕಾನಂದರ ಆಲೋಚನೆಗಳು ಮತ್ತು ವೈಯಕ್ತಿಕ ಸಂದೇಶಗಳನ್ನು ನೀವು ಹಂಚಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಅವರ ಅದ್ವಿತೀಯ ಆಲೋಚನೆಗಳನ್ನು ಇಂದಿನ ಜನಾಂಗದವರಿಗೆ ಪಸರಿಸುವ ಕೆಲಸ ಮಾಡೋಣ ಎಂದು ಆಪ್ ನ ಲಿಂಕ್ ನ್ನು ಶೇರ್ ಮಾಡಿದ್ದಾರೆ.

ಸ್ವಾಮಿ ವಿವೇಕಾನಂದರ ಮಹಾನ್ ಆದರ್ಶಗಳಿಂದ ಮತ್ತು ಯುವ ಸಬಲೀಕರಣದ ದೃಷ್ಟಿಯಿಂದ ಪ್ರೇರಿತರಾದ ರಾಷ್ಟ್ರೀಯ ಯುವ ಸಂಸತ್ತಿನ ಉತ್ಸವವು ದೇಶದ ಯುವಕರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ನೀಡುತ್ತದೆ. ಇದು ಯುವಕರಲ್ಲಿ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಮನೋಭಾವವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನನ್ನ ವಿದೇಯ ನಮನಗಳು. ಇಡೀ ಮನುಕುಲಕ್ಕೆ ಅವರೊಬ್ಬ ಸ್ಪೂರ್ತಿ. ವಿಶೇಷವಾಗಿ ಯುವಜನತೆಗೆ ಅವರು ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಿದರು ಮತ್ತು ಅದನ್ನು ಜಾಗತಿಕ ರಂಗದಲ್ಲಿ ಕೇಂದ್ರೀಕರಿಸಿದರು.ಅವರ ಬೋಧನೆಗಳು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇವೆ ಎಂದು ಟ್ವೀಟ್ ಮಾಡಿದ್ದಾರೆ.

ವಿವೇಕಾನಂದರು 1863 ಜನವರಿ 12 ರಂದು ಆಗಿನ ಬ್ರಿಟಿಷ್ ಆಡಳಿತ ಬಾಂಬೆ ಪ್ರೆಸಿಡೆನ್ಸಿಯ ಕಲ್ಕತ್ತಾದಲ್ಲಿ ಜನಿಸಿದರು. ಈಗ ಪಶ್ಚಿಮ ಬಂಗಾಳ ಎಂದು ಕರೆಯಲಾಗುತ್ತದೆ. ಅವರ ಮೂಲ ಹೆಸರು ನರೇಂದ್ರ ನಾಥ್ ದತ್ತ. ತಮ್ಮ 39ನೇ ವಯಸ್ಸಿನಲ್ಲಿ ಅವರು ಗುರು ರಾಮಕೃಷ್ಣ ಅವರ ಬೇಲೂರು ಮಠದಲ್ಲಿ ದಿವಂಗತರಾದರು. ಸ್ವಾಮಿ ವಿವೇಕಾನಂದರು ಯುವಜನತೆಗೆ ಪ್ರೇರಣೆಯಾಗಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: