ಕ್ರೀಡೆದೇಶಪ್ರಮುಖ ಸುದ್ದಿ

ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್, ಎಚ್.ಎಸ್.ಪ್ರಣಯ್ ಗೆ ಕೋವಿಡ್ ಸೋಂಕು: ಥಾಯ್ಲೆಂಡ್ ಟೂರ್ನಿಯಿಂದ ಹೊರಕ್ಕೆ

ನವದೆಹಲಿ,ಜ.12-ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಎಚ್.ಎಸ್.ಪ್ರಣಯ್ ಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಇಬ್ಬರಿಗೆ ಸೋಂಕು ತಗುಲಿರುವ ವಿಚಾರವನ್ನು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಟ್ವೀಟ್ ಮೂಲಕ ತಿಳಿಸಿದೆ. ಥಾಯ್ಲೆಂಡ್ ಓಪನ್ ಬ್ಯಾಟ್ಮಿಂಟನ್ ಟೆನ್ನಿಸ್ ಟೂರ್ನಿಗೂ ಮುನ್ನ ಕೋವಿಡ್ ಪರೀಕ್ಷೆಗೆ ಸೈನಾ ನೆಹ್ವಾಲ್ ಹಾಗೂ ಎಚ್.ಎಸ್.ಪ್ರಣಯ್ ಒಳಗಾಗಿದ್ದರು. ಇಬ್ಬರ ಪರೀಕ್ಷಾ ವರದಿ ಬಂದಿದ್ದು, ಇಬ್ಬರಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಹೀಗಾಗಿ ಬ್ಯಾಂಕಾಕ್ ನಲ್ಲಿ ನಡೆಯಲಿರುವ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಸೈನಾ ನೆಹ್ವಾಲ್, ಪ್ರಣಯ್ ಅವರು ಹಿಂದೆ ಸರಿದಿದ್ದಾರೆ ಎಂದು ತಿಳಿಸಿದೆ.

ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಇಬ್ಬರು ಆಟಗಾರರನ್ನು ಬ್ಯಾಂಕಾಕ್‌ ನ ಆಸ್ಪತ್ರೆಯೊಂದರಲ್ಲಿ ಕನಿಷ್ಠ 10 ದಿನಗಳ ಕಾಲ ಐಸೋಲೇಷನ್ ನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಸೈನಾ ನೆಹ್ವಾಲ್ ಗೆ ಕೋವಿಡ್ ಸೋಂಕು ತಗುಲಿರುವುದರಿಂದ ಅವರ ಪತಿ ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ವರದಿಗಾಗಿ ಕಾಯಲಾಗುತ್ತಿದೆ. ಪರುಪಳ್ಳಿ ಕಶ್ಯಪ್, ಸೈನಾ ನೆಹ್ವಾಲ್ ರ ಜೊತೆಗಿದ್ದ ಕಾರಣ ಅವರಿಗೂ ಸೋಂಕು ಹರಡಿರುವ ಸಾಧ್ಯತೆಗಳಿವೆ ಎಂದು ಟೂರ್ನಿಯಿಂದ ಹೊರಗಿಡಲಾಗಿದೆ ಎಂದು ವರದಿ ತಿಳಿಸಿದೆ.

ಇಂದಿನಿಂದ ಥಾಯ್ಲೆಂಟ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆರಂಭವಾಗಿದೆ. ಕೋವಿಡ್ ನಿಂದಾಗಿ ಸುಮಾರು 10 ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಸ್ಪರ್ಧೆಗಳಿಗೆ ಥಾಯ್ಲೆಂಡ್ ಓಪನ್ ಸೂಪರ್ 1000 ಟೂರ್ನಿಯ ಮೂಲಕ ಚಾಲೆ ದೊರೆಯಲಿದೆ.

ಟೂರ್ನಿಯಲ್ಲಿ ಭಾರತದ ತಾರಾ ಆಟಗಾರ್ತಿಯರಾದ ಸೈನಾ ನೆಹ್ವಾಲ್, ಪಿ.ವಿ.ಸಿಂಧು ಕಣಕ್ಕಿಳಿಯಲಿದ್ದರು. ಆದರೆ ಸೈನಾಗೆ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಅವರೀಗ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್, ಬಿ.ಸಾಯಿ ಪ್ರಣೀತ್, ಎಚ್.ಎಸ್.ಪ್ರಣಯ್, ಸೌರಭ್ ವರ್ಮಾ, ಪರುಪಳ್ಳಿ ಕಶ್ಯಪ್, ಸಮೀರ್ ವರ್ಮಾ ಆಡುತ್ತಿದ್ದಾರೆ. ಪ್ರಣಯ್ ಗೆ ಸೋಂಕು ತಗುಲಿರುವುದರಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ. ಪರುಪಳ್ಳಿ ಕಶ್ಯಪ್ ಅವರು ಟೂರ್ನಿಯಲ್ಲಿ ಆಡಲಿದ್ದಾರಾ ಎಂಬುದು ಕೋವಿಡ್ ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ.

ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ, ಚಿರಾಗ್ ಶೆಟ್ಟಿ, ಮನು ಅತ್ರಿ, ಬಿ.ಸುಮಿತ್ ರೆಡ್ಡಿ, ಎಂ.ಆರ್.ಅರ್ಜುನ, ಧೃವ ಕಪಿಲ, ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ, ಎನ್.ಸಿಕ್ಕಿರೆಡ್ಡಿ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್, ಅಶ್ವಿನಿ ಕಣಕ್ಕಿಳಿಯಲಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: