
ಕ್ರೀಡೆಪ್ರಮುಖ ಸುದ್ದಿ
ಗಾಯದ ಸುಳಿಯಲ್ಲಿ ಟೀಂ ಇಂಡಿಯಾ ಆಟಗಾರರು: ಆಸ್ಟ್ರೇಲಿಯಾಕ್ಕೆ ಹೋಗಲು ನಾನು ಸಿದ್ಧ ಎಂದ ವೀರೇಂದ್ರ ಸೆಹ್ವಾಗ್
ಬ್ರಿಸ್ಬೇನ್,ಜ.13-ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಅನೇಕ ಆಟಗಾರರು ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ.
ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್ ಅಕ್ಷರಶಃ “ಹಾಸ್ಪಿಟಲ್ ವಾರ್ಡ್ ‘ನಂತಾಗಿದೆ. ಇಲ್ಲಿ ಯಾರೆಲ್ಲ ಗಾಯಾಳಾಗಿದ್ದಾರೆ ಎಂದು ಲೆಕ್ಕ ಹಾಕುತ್ತ ಹೋದರೆ ಬಹುಶಃ ಅಂತಿಮ ಟೆಸ್ಟ್ ಪಂದ್ಯಕ್ಕೆ ಪೂರ್ತಿ ಫಿಟ್ನೆಸ್ ಹೊಂದಿರುವ 11 ಆಟಗಾರರನ್ನು ಆರಿಸುವುದೇ ದೊಡ್ಡ ಸಮಸ್ಯೆಯಾಗಲಿದೆ!
ನಿನ್ನೆ ಜಸ್ಪ್ರೀತ್ ಬುಮ್ರಾ ಕೂಡ ಕಿಬ್ಬೊಟ್ಟೆ ಸ್ನಾಯು ಸೆಳೆತಕ್ಕೆ ಸಿಲುಕಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯುವಂತಾದದ್ದು. ಬಳಿಕ ಅಭ್ಯಾಸದ ವೇಳೆ ಮಾಯಾಂಕ್ ಅಗರ್ವಾಲ್ ಕೂಡ ಚೆಂಡಿನೇಟು ಅನುಭವಿಸಿದ ಘಟನೆ ಸಂಭವಿಸಿದೆ. ಅವರನ್ನು ಸ್ಕ್ಯಾನಿಂಗ್ಗೆ ಕರೆದೊಯ್ಯಲಾಗಿದೆ. ಹನುಮ ವಿಹಾರಿ ಬದಲು ಬ್ರಿಸ್ಬೇನ್ ಟೆಸ್ಟ್ನಲ್ಲಿ ಅಗರ್ವಾಲ್ ಆಡುವ ಸಾಧ್ಯತೆಯಿತ್ತು. ಇದೀಗ ಅವರಿಗೂ ಗಾಯವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್, ಇಷ್ಟೆಲ್ಲಾ ಆಟಗಾರರು ಗಾಯಗೊಂಡಿದ್ದಾರೆ. ಪ್ಲೇಯಿಂಗ್ XIಗೆ ಜನ ಸಾಕಾಗದಿದ್ದರೆ ಆಸ್ಟ್ರೇಲಿಯಾಕ್ಕೆ ಹೋಗಲು ನಾನು ತಯಾರಿದ್ದೇನೆ. ಆದರೆ ಕ್ವಾರಂಟೈನ್ ಅನ್ನು ಮಾತ್ರ ಬಿಸಿಸಿಐ ನೋಡಿಕೊಳ್ಳಬೇಕು ಎಂದಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಬಳಿಕ ಪಿತೃತ್ವ ರಜೆ ಪಡೆದು ಭಾರತಕ್ಕೆ ಮರಳಿದ್ದಾರೆ. ಭುವನೇಶ್ವರ್ ಕುಮಾರ್ (ತೊಡೆ ಸ್ನಾಯುಗಳ ಗಾಯ), ಇಶಾಂತ್ ಶರ್ಮಾ (ಸೊಂಟ ಮತ್ತು ತೊಡೆ ಮೂಳೆ ಸೇರುವಲ್ಲಿ ನೋವು), ಮೊಹಮ್ಮದ್ ಶಮಿ (ಬಲಗೈಗೆ ಗಾಯ), ಉಮೇಶ್ ಯಾದವ್ (ಕಾಲಿನ ಹಿಂಬಾಗದ ಸ್ನಾಯುಗಳು (ಕಾಫ್) ಬೇನೆ), ಕೆ.ಎಲ್.ರಾಹುಲ್ (ಕೈ ಮಣಿಕಟ್ಟು ಗಾಯ), ಹನುಮ ವಿಹಾರಿ (ಹ್ಯಾಮ್ಸ್ಟ್ರಿಂಗ್), ರವೀಂದ್ರ ಜಡೇಜಾ (ಹೆಬ್ಬೆಟ್ಟಿಗೆ ಗಾಯ), ಜಸ್ಪ್ರೀತ್ ಬೂಮ್ರಾ (ಕಿಬ್ಬೊಟ್ಟೆ ನೋವು) ಗಾಯದ ಸಮಸ್ಯೆಯಿಂದಾಗಿ ಈಗಾಗಲೇ ತಂಡದಿಂದ ಹೊರಗುಳಿದಿದ್ದಾರೆ.
ರಿಷಭ್ ಪಂತ್ (ಮೊಣಕೈಗೆ ಗಾಯ) ತಂಡದಿಂದ ಹೊರ ಬೀಳುವ ಭೀತಿ ಎದುರಿಸುತ್ತಿದ್ದು, ರವಿಚಂದ್ರನ್ ಅಶ್ವಿನ್, (ಬೆನ್ನುನೋವು) ಗಾಯದ ಭೀತಿ ಎದುರಿಸುತ್ತಿದ್ದಾರೆ.
ಗಾಯದ ಸುಳಿಯಲ್ಲಿ ಟೀಂ ಇಂಡಿಯಾ ಸಿಲುಕಿದ್ದರು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದ್ದು, ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ನಾಲ್ಕನೇ ಹಾಗೂ ಸರಣಿಯ ಅಂತಿಮ ಪಂದ್ಯ ಜ.15 ರಿಂದ ಪ್ರಾರಂಭವಾಗಲಿದೆ.
ವೀರೇಂದ್ರ ಸೆಹ್ವಾಗ್ ಭಾರತದ ಪ್ರಮುಖ ಆರಂಭಿಕ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದರು. ಆಕ್ರಮಣಕಾರಿ ಆಟಕ್ಕೆ ಹೆಚ್ಚು ಜನಪ್ರಿಯರಾಗಿದ್ದರು. ವೀರೂ ಅವರು 104 ಟೆಸ್ಟ್ ಪಂದ್ಯಗಳಲ್ಲಿ 49.34ರ ಸರಾಸರಿಯಂತೆ 8586 ರನ್ ಬಾರಿಸಿದ್ದಾರೆ. ಇದರಲ್ಲಿ 23 ಶತಕ, 6 ದ್ವಿಶತಕಗಳು ಸೇರಿವೆ. ಅಂದ್ಹಾಗೆ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯ ನಿರ್ಣಾಯಕ 4ನೇ ಪಂದ್ಯ ಜನವರಿ 15ರಿಂದ ಬ್ರಿಸ್ಬೇನ್ ಗಬ್ಬಾ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. (ಏಜೆನ್ಸೀಸ್, ಎಂ.ಎನ್)