ಕರ್ನಾಟಕಪ್ರಮುಖ ಸುದ್ದಿ

ಶಿಳ್ಳೆ, ಚಪ್ಪಾಳೆ ನಡುವೆ ರಾಸುಗಳ ಕಿಚ್ಚು ಹಾಯಿಸಿದ ಯುವ ಸಮೂಹ

ರಾಜ್ಯ(ಮಂಡ್ಯ)ಜ.15:- ಸಂಕ್ರಾಂತಿ ಹಬ್ಬದ ಅಂಗವಾಗಿ ಜಾನುವಾರುಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ನಗರ ಮತ್ತು ಜಿಲ್ಲಾದ್ಯಂತ ನಡೆಯಿತು. ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಜನಸ್ತೋಮದ ನಡುವೆ ಜಾನುವಾರುಗಳಿಗೆ ಕಿಚ್ಚು ಹಾಯಿಸಲಾಯಿತು.
ವಿವಿಧ ಯುವ ಸಂಘಟನೆಗಳು, ಚಿಕ್ಕ ಪುಟ್ಟ ಮಕ್ಕಳು ಎತ್ತುಗಳನ್ನು ಹಿಡಿದು ತಂದು ಕಿಚ್ಚು ಹಾಯಿಸಿದ್ದು ವಿಶೇಷವಾಗಿತ್ತು. ಎತ್ತರದ ಬೆಂಕಿಯಲ್ಲಿ ನೆಗೆಯುತ್ತಿದ್ದ ಗೂಳಿಗಳನ್ನು ನೋಡಿದ ಜನಸ್ತೋಮ ಶಿಳ್ಳೆ, ಚಪ್ಪಾಳೆಗಳೊಂದಿಗೆ ಜಯಘೋಷ ಮೊಳಗಿಸಿದ್ದು ಕಂಡುಬಂತು.
ಪ್ರಾರಂಭದಲ್ಲಿ ತಾ ಮುಂದು, ನಾ ಮುಂದು ಎನ್ನುವಂತೆ ಯುವಕರು ಬಸವಗಳ ಕಿಚ್ಚು ಹಾಯಿಸಿದರೆ, ಉರಿವ ಜ್ವಾಲೆಯ ನಡುವೆ ಒಂದಷ್ಟು ಮಂದಿ ಗೂಳಿಗಳ ಕಿಚ್ಚು ಹಾಯಿಸಿದ್ದು ಎಲ್ಲರ ಎದೆ ನಡುಗಿಸಿತ್ತು. ಕಿಚ್ಚು ಕಂಡ ಬಸವಗಳು ಹಗ್ಗಗಳನ್ನು ಕಿತ್ತುಕೊಂಡು ಜನರ ನಡುವೆ ನುಗ್ಗಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಇದನ್ನು ಕಂಡ ಜನಸ್ತೋಮ ಘೋಷಣೆ ಮೊಳಗಿಸಿದ್ದರು.
ಒಂದೊಂದು ಹಸು, ಎತ್ತು, ಬಸವಗಳಿಗೆ ಭಿನ್ನ, ವಿಭಿನ್ನ ಹೆಸರುಗಳ ಬಣ್ಣದ ಚಿತ್ತಾರವನ್ನು ಮೈಮೇಲೆ ಬಿಡಿಸಿದ್ದರು. ತಮಟೆ, ನಗಾರಿ ಸದ್ದಿನೊಂದಿಗೆ ರಾಜಗಾಂಭಿರ್ಯದ ಹೆಜ್ಜೆಯನ್ನಿಡುತ್ತಾ ಕಿಚ್ಚು ಹಾಯಿಸುವ ಸ್ಥಳಕ್ಕೆ ಕೆಲವು ಬಸವಗಳು ಬರುತ್ತಿದ್ದುದು ಕಂಡ ಜನತೆ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದುದು ಕಂಡುಬಂತು.
ನಗರದ ಹೊಸಹಳ್ಳಿ, ಹಾಲಹಳ್ಳಿ, ಚಾಮುಂಡೇಶ್ವರಿನಗರ, ಕ್ಯಾತುಂಗೆರೆ, ಕಲ್ಲಹಳ್ಳಿ, ಸ್ವರ್ಣಸಂದ್ರ, ಚಿಕ್ಕಮಂಡ್ಯ, ಕೋಣನಹಳ್ಳಿ ಸೇರಿದಂತೆ ವಿವಿಧೆಡೆ ಕಿಚ್ಚು ಹಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: