ದೇಶಪ್ರಮುಖ ಸುದ್ದಿ

ಬ್ಯಾಸ್ಕೆಟ್‌ಬಾಲ್ ಜನಕ ಡಾ. ಜೇಮ್ಸ್ ನೈಸ್ಮಿತ್ ಗೆ ಗೌರವ ನಮನ ಸಲ್ಲಿಸಿದ ಗೂಗಲ್ ಡೂಡಲ್

ನವದೆಹಲಿ,ಜ.15-ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಜನಕ ಡಾ. ಜೇಮ್ಸ್ ನೈಸ್ಮಿತ್ ಗೆ ಇಂದು ಗೂಗಲ್ ಡೂಡಲ್ ಮೂಲಕ ಗೌರವ ನಮನ ಸಲ್ಲಿಸಿದೆ.

ಡಾ. ಜೇಮ್ಸ್ 1891 ರಲ್ಲಿ ಜನವರಿ 15 ರಂದು ಬ್ಯಾಸ್ಕೆಟ್‌ಬಾಲ್ ಆಟವನ್ನು ಕಂಡುಹಿಡಿದರು. ಈ ಹಿನ್ನೆಲೆಯಲ್ಲಿ ಇಂದಿನ ಗೂಗಲ್ ಡೂಡಲ್ ಅವರಿಗೆ ಸಮರ್ಪಿತವಾಗಿದೆ.

ಜೇಮ್ಸ್ ಅವರು ಹೊಸ ಆಟ ಮತ್ತು ಅದರ ಮೂಲ ನಿಯಮಗಳನ್ನು ಸ್ಪ್ರಿಂಗ್‌ಫೀಲ್ಡ್ ಕಾಲೇಜು ಶಾಲೆಯ ಪತ್ರಿಕೆ ‘ದಿ ಟ್ರಯಾಂಗಲ್’ ನ ಪುಟಗಳಲ್ಲಿ ಘೋಷಿಸಿದರು. ಶಾಲಾ ಜಿಮ್ನಾಷಿಯಂನಲ್ಲಿ ಅದರ ಪ್ರಾರಂಭವಾಗಿದ್ದು ಇಂದು ಈ ಕ್ರೀಡೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಬ್ಯಾಸ್ಕೆಟ್‌ಬಾಲ್ ಅನ್ನು ಇಂದು 200 ಕ್ಕೂ ಹೆಚ್ಚು ದೇಶಗಳಲ್ಲಿ ಆಡಲಾಗುತ್ತದೆ.

1890 ರಲ್ಲಿ, ಜೇಮ್ಸ್ ಮ್ಯಾಸಚೂಸೆಟ್ಸ್ ನ ಸ್ಪ್ರಿಂಗ್ಫೀಲ್ಡ್ ನಲ್ಲಿರುವ ವೈಎಂಸಿಎ ಅಂತರರಾಷ್ಟ್ರೀಯ ತರಬೇತಿ ಕಾಲೇಜಿನಲ್ಲಿ ಬೋಧಕರಾಗಿ ಸೇರಿದರು. ಚಳಿಗಾಲದಲ್ಲಿ ವಿದ್ಯಾರ್ಥಿಗಳನ್ನು ಚಟುವಟಿಕೆಯಾಗಿರಿಸಬಲ್ಲ ಒಳಾಂಗಣ ಆಟವನ್ನು ಅಭಿವೃದ್ಧಿಪಡಿಸಲು ಜೇಮ್ಸ್ ಗೆ ಅಲ್ಲಿ ಕೇಳಲಾಗಿತ್ತು. ಎರಡು ಪೀಚ್ ಬುಟ್ಟಿಗಳು, ಸಾಕರ್ ಬಾಲ್ ಮತ್ತು ಕೇವಲ ಹತ್ತು ನಿಯಮಗಳೊಂದಿಗೆ, ‘ಬ್ಯಾಸ್ಕೆಟ್ ಬಾಲ್’ ಆಟವು ಆ ದಿನ ಹುಟ್ಟಿಕೊಂಡಿತ್ತು!!

ಜರ್ಮನಿಯ ಬರ್ಲಿನ್‌ನಲ್ಲಿ 1936 ರ ಕ್ರೀಡಾಕೂಟದಲ್ಲಿ ಬಾಸ್ಕೆಟ್‌ಬಾಲ್ ಒಲಿಂಪಿಕ್‌ಗೆ ಪಾದಾರ್ಪಣೆ ಮಾಡಿತು. ಅಂದು ಆ ಪಂದ್ಯದಲ್ಲಿ ಮೊದಲ ಬಾರಿಗೆ ಈ ಆಟದ ಜನಕರಾದ ಜೇಮ್ಸ್ ಮೊದಲ ಚೆಂಡನ್ನು ಬಾಸ್ಕೆಟ್ ನತ್ತ ಎಸೆದಿದ್ದರು.

ನವೆಂಬರ್ 6, 1861 ರಂದು ಕೆನಡಾದ ಒಂಟಾರಿಯೊದ ಅಲ್ಮಾಂಟೆ ಪಟ್ಟಣದ ಬಳಿ ಜನಿಸಿದ ಡಾ.ಜೇಮ್ಸ್ ನೈಸ್ಮಿತ್ ಕೆನಡಿಯನ್-ಅಮೇರಿಕನ್ ದೈಹಿಕ ಶಿಕ್ಷಕ, ಪ್ರಾಧ್ಯಾಪಕ, ವೈದ್ಯ ಮತ್ತು ತರಬೇತುದಾರರೂ ಆಗಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: