ದೇಶಪ್ರಮುಖ ಸುದ್ದಿ

ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ,ಜ.16-ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇಂದಿನಿಂದ ದೇಶಾದ್ಯಂತ ಲಸಿಕೆ ಲಭ್ಯವಾಗಲಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ವೈರಸ್ ಲಸಿಕೆ ಅಭಿಯಾನಕ್ಕೆ ಮೋದಿ ಚಾಲನೆ ನೀಡಿದರು. ಲಸಿಕೆ ಚಾಲನೆ ನೀಡಿದ ಬಳಿಕ ಮೋದಿಯವರು ಜನಸಾಮಾನ್ಯರು ಲಸಿಕೆ ಪಡೆಯಲು ಕಡ್ಡಾಯವಾಗಿರುವ ಕೋ-ವಿನ್ ಆಯಪ್’ಗೂ ಚಾಲನೆ ನೀಡಿದ್ದಾರೆ.

ಮೊದಲ ದಿನ ದೇಶದ 3006 ಲಸಿಕಾ ಕೇಂದ್ರಗಳಲ್ಲಿ ಸುಮಾರು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗುತ್ತಿದೆ. ಮುಂದಿನ 3-4 ತಿಂಗಳಲ್ಲಿ ಸುಮಾರು 30 ಕೋಟಿ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು ಎಂದು ವರದಿ ತಿಳಿಸಿದೆ.

ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಡೀ ವಿಶ್ವವೇ ಇಂದು ಭಾರತದ ಕಡೆ ತಿರುಗಿ ನೋಡುತ್ತಿದೆ. ಈ ದಿನಕ್ಕಾಗಿ ಎಲ್ಲರೂ ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ಲಸಿಕೆ ಯಾವಾಗ ಬರುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಇದೀಗ ಅದು ದೊರೆತಿದೆ. ಈ ಸಂದರ್ಭದಲ್ಲಿ ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆಂದ ಅವರು, ಇನ್ನು ಕೆಲವೇ ನಿಮಿಷಗಳಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನ ಆರಂಭವಾಗಲಿದೆ ಎಂದರು.

ಸಾಮಾನ್ಯವಾಗಿ ಒಂದು ಲಸಿಕೆ ಕಂಡು ಹಿಡಿಯಲು ಹಲವು ವರ್ಷಗಳೇ ಬೇಕಾಗುತ್ತಿತ್ತು. ಆದರೆ, ಕೆಲವೇ ಸಮಯದಲ್ಲಿ ಒಂದಲ್ಲ, ಎರಡು ದೇಶೀ ನಿರ್ಮಿತ ಲಸಿಕೆಗಳು ತಯಾರಾಗಿವೆ. ಇದೇ ವೇಳೆ ಇತರೆ ಲಸಿಕೆಗಳ ಅಭಿವೃದ್ಧಿ ಕೂಡ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಲಸಿಕೆಯ ಎರಡು ಲಸಿಕೆಗಳು ಬಹಳ ಮುಖ್ಯವೆಂದು ನಾನು ದೇಶದ ಜನರಿಗೆ ಹೇಳಲು ಬಯಸುತ್ತೇನೆ. ಎರಡೂ ವ್ಯಾಕ್ಸಿನೇಷನ್‌ಗಳ ನಡುವೆ ಒಂದು ತಿಂಗಳ ಅಂತರವಿರಬೇಕು ಎಂದು ತಜ್ಞರು ಹೇಳಿದ್ದಾರೆ ಎಂದರು.

ಕೊರೊನಾ ಲಸಿಕೆ ಸಿಕ್ಕಿದ ಮಾತ್ರಕ್ಕೆ ಮಾಸ್ಕ್ ಇಲ್ಲದೆ ಓಡಾಡುವುದು ಮತ್ತು ಅಂತರ ಕಾಯ್ದುಕೊಳ್ಳದೆ ಇರುವುದು ಸರಿಯಲ್ಲ. ಲಸಿಕೆ ಸಿಕ್ಕರೂ ಸಹ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

130 ಕೋಟಿ ಭಾರತೀಯರ ಬಹುಸಮಯದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಸಾಕಾರಗೊಂಡಿದೆ. ಇದರಿಂದ ಇಡೀ ವಿಶ್ವವನ್ನೇ ಕಾಡಿದ ಕೊರೊನಾ ಸೋಂಕು ನಿಯಂತ್ರಣಕ್ಕೆ ಒಂದೇ ವರ್ಷದಲ್ಲಿ ಭಾರತ ದಿಟ್ಟ ಹೆಜ್ಜೆ ಇಟ್ಟಂತಾಗಿದೆ. (ಏಜೆನ್ಸೀಸ್, ಎಂ.ಎನ್)

 

 

Leave a Reply

comments

Related Articles

error: