ಮೈಸೂರು

ಸುಳ್ಳು ಸುದ್ದಿಗಳ ಮುಖೇನ ಶಾಂತಿಯುತ ಸಮಾಜದ ಸ್ವಾಸ್ಥ್ಯ ನಾಶ : ಡಾ.ಎಂ.ಎಸ್.ಸಪ್ನಾ ಅಭಿಮತ

ಮೈಸೂರು, ಜ.17:- ನಗರದ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ‘ಎಸ್‍ವಿಜಿ ಎಜುಕೇಷನಲ್ ಫೌಂಡೇಶನ್’ ಹಾಗೂ ‘ಗೂಗಲ್ ಇಂಡಿಯಾ ಫ್ಯಾಕ್ಟ್ ಶಾಲಾ’ ಇವರ ಸಹಯೋಗದಲ್ಲಿ ‘ಮಾಧ್ಯಮ ಸಾಕ್ಷರತೆ ಮತ್ತು ಭದ್ರತಾ ಜಾಗೃತಿ’ ಕುರಿತು ತರಬೇತಿ ಕಾರ್ಯಕ್ರಮವನ್ನು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎಂ.ಎಸ್.ಸಪ್ನಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಾದ ಫೇಸ್‍ಬುಕ್, ವಾಟ್ಸ್ ಆಪ್, ಟ್ವಿಟರ್, ಇನ್ಸ್ಟಾಗ್ರಾಮ್‍ ಗಳನ್ನು ಜನಸಾಮಾನ್ಯರು ಹೆಚ್ಚಾಗಿ ಬಳಸುತ್ತಿದ್ದಾರೆ. ಪ್ರತಿಯೊಬ್ಬರು ಈ ಮಾಧ್ಯಮಗಳಲ್ಲಿ ತಮ್ಮ ಕೆಲವು ಮಾಹಿತಿಗಳನ್ನು, ಭಾವಚಿತ್ರಗಳನ್ನು ಹಾಕುವ ಮೂಲಕ ಪ್ರಕಾಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಮಾಧ್ಯಮಗಳಲ್ಲಿ ಕೆಲವೊಂದು ಸುದ್ದಿಗಳು ಸರಿಯಾದ ಸುದ್ದಿಗಳಂತೆ ಮೇಲ್ನೋಟಕ್ಕೆ ಕಂಡರೂ ಅವು ಸುಳ್ಳು ಸುದ್ದಿಗಳಾಗಿರುತ್ತವೆ. ಇಂದು 90% ರಷ್ಟು ಸುಳ್ಳುಸುದ್ದಿಗಳು ಸಾಮಾಜಿಕ ಮಾಧ್ಯಮದ ಮೂಲಕವೇ ಹರಡಲಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಇತಿಹಾಸ ಮಹಾಪುರುಷರ ಮತ್ತು ಕೆಲವು ರಾಜಕೀಯ ಗಣ್ಯವ್ಯಕ್ತಿಗಳ ಹೆಸರಿನಲ್ಲಿ ಅನೇಕ ಸುಳ್ಳುಸುದ್ದಿಗಳನ್ನು ಕೆಲವರು ರಚಿಸಿ, ಇವರ ಭಾವಚಿತ್ರದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತವೆ. ಇಂತಹ ಮಾಹಿತಿಗಳನ್ನು ಕೆಲವರು ನೋಡಿದ ತಕ್ಷಣ ಅವುಗಳ ಹಿಂದಿನ ಸತ್ಯಾಸತ್ಯತೆಯನ್ನು ತಿಳಿಯುವ ಗೋಜಿಗೆ ಹೋಗದೆ ಇನ್ನಷ್ಟು ಜನರಿಗೆ ಕಳುಹಿಸುವ ಕಾರ್ಯವನ್ನು ಮಾಡುತ್ತಾರೆ. ಇದು ನಮ್ಮ ದೊಡ್ಡ ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ಎಲ್ಲೆಲ್ಲೋ ನಡೆದ ಘಟನೆಗಳ ಚಿತ್ರಗಳನ್ನು, ವಿಡಿಯೋ ತುಣುಕುಗಳನ್ನು ನಮ್ಮಲ್ಲಿಯೇ ನಡೆದಿವೆ ಎಂಬಂತೆ ಬಿಂಬಿಸಿ ಅದಕ್ಕೊಂದು ತಲೆಬರೆಹವನ್ನು ನೀಡಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರು ನಮ್ಮ ನಡುವೆ ಇದ್ದಾರೆ. ಈ ರೀತಿಯ ಸುಳ್ಳುಸುದ್ದಿಗಳು ಶಾಂತಿಯುತ ಸಮಾಜದ ಸ್ವಾಸ್ಥ್ಯ ನಾಶಮಾಡುವ ಕಾರ್ಯವನ್ನು ಮಾಡುತ್ತದೆ. ಶಿಕ್ಷಣವನ್ನು ಪಡೆದು ಪ್ರಗತಿಯನ್ನು ಹೊಂದಿದ ನಾವು ಯಾವುದಾದರು ಮೆಸೇಜ್, ವಿಡಿಯೋಗಳನ್ನು ನೋಡಿದಾಗ ಅವುಗಳ ಸತ್ಯಾಸತ್ಯೆತೆಯನ್ನು ತಿಳಿಯದೆ ಯಾವುದೇ ಕಾರಣಕ್ಕೂ ಮತ್ತೊಬ್ಬರಿಗೆ ಕಳುಹಿಸುವ ಕಾರ್ಯ ಮಾಡಬಾರದು ಎಂದು ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ ಅವರು ವಹಿಸಿದ್ದರು. ಆಡಳಿತಾಧಿಕಾರಿ ಡಾ.ಕೆಂಪೇಗೌಡ, ಪ್ರಾಂಶುಪಾಲ ರಚನ್ ಅಪ್ಪಣಮಯ್ಯ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: