ಕರ್ನಾಟಕಪ್ರಮುಖ ಸುದ್ದಿಮೈಸೂರು

ಐತಿಹಾಸಿಕ ಮೈಸೂರು ದಸರಾಕ್ಕೆ ಕ್ಷಣಗಣನೆ : ಸಂಭ್ರಮಾಚರಣೆಗೆ ಸಿದ್ಧಗೊಂಡ ನಗರ

ಐತಿಹಾಸಿಕ ದಸರಾ ಉತ್ಸವಕ್ಕೆ ಚಾಲನೆ ದೊರಕಲು ಒಂದೇ ದಿನ ಬಾಕಿ ಉಳಿದಿದ್ದು ಕ್ಷಣಗಣನೆ ಆರಂಭವಾಗಿದೆ. ಚಾಮುಂಡಿ ಬೆಟ್ಟದಲ್ಲಿ ಭರದಿಂದ ಸಿದ್ಧತೆಗಳು ನಡೆದಿವೆ. ನಾಡೋಜ ಚನ್ನವೀರ ಕಣವಿಯವರು ದಸರಾ ಉತ್ಸವದ ಉದ್ಘಾಟನೆಯನ್ನು ಶನಿವಾರ ಚಾಮುಂಡಿ ಬೆಟ್ಟದಲ್ಲಿ ನೆರವೇರಿಸಲಿದ್ದು, ವೇದಿಕೆ ಸಿದ್ಧಗೊಳ್ಳುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿವಿಧ ಕೆಲಸ-ಕಾರ್ಯಗಳ  ವೀಕ್ಷಣೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟದಲ್ಲಿ 15ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಭದ್ರತೆ ಒದಗಿಸಿದ್ದಾರೆ. ಮೈಸೂರು ದಸರಾ ಉತ್ಸವದ ಉದ್ಘಾಟನೆಯ ವೇಳೆ ಉಪಸ್ಥಿತರಿರುವ ಎಲ್ಲರಿಗೂ ಆಸನ ವ್ಯವಸ್ಥೆ ಮಾಡಲಾಗಿದೆ.

ದೇವಳದ ಆಡಳಿತ ಮಂಡಳಿಯು ಅವಶ್ಯಕ ಸಿದ್ಧತೆಗಳನ್ನು ನಡೆಸಿದ್ದು, ಚಾಮುಂಡೇಶ್ವರಿ ಮೂರ್ತಿಗೆ ವಿಧಿವತ್ತಾಗಿ ಜಲಾಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ಸಲ್ಲಿಸಲಾಗುತ್ತಿದೆ.

ಇಡೀ ಮೈಸೂರು ನಗರವೇ ನವವಧುವಿನಂತೆ ಸಿಂಗಾರಗೊಂಡಿದ್ದು, ಕ್ಷಣಗಣನೆ ಆರಂಭವಾಗಿದೆ. ದೊಡ್ಡ ದೊಡ್ಡ ಕಟ್ಟಡಗಳು, ಮಾಲ್ ಗಳು, ಪ್ರಮುಖ ವೃತ್ತಗಳು ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಸಿಂಗಾರಗೊಂಡು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಡೆಪ್ಯುಟಿ ಕಮಿಷನರ್ ಮತ್ತು ಪೊಲೀಸ್ ಅಧೀಕ್ಷಕರು ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡು ಮಾರ್ಗದರ್ಶನ ನೀಡುತ್ತಿದ್ದಾರೆ. ನಗರದಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Leave a Reply

comments

Related Articles

error: