ಮೈಸೂರು

ಆನೆ ಹಾವಳಿ ತಡೆಯಲು ಕಂಬಿ ಬೇಲಿ ನಿರ್ಮಾಣ

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಬರುವ ಮತ್ತಿಗೋಡು ಅರಣ್ಯ ವಲಯಕ್ಕೆ ಸೇರಿದ ನಿಟ್ಟೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುಂಬಾರಕಟ್ಟೆಯಿಂದ ತಿತಿಮತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಡುಗುಂಡಿವರೆಗೆ ಆನೆ ಹಾವಳಿ ತಡೆಯಲು 2ಕಿ.ಮೀ ಉದ್ದದ ರೈಲ್ವೆ  ಹಳಿ ಕಂಬಿ ಬೇಲಿಯನ್ನು ನಿರ್ಮಿಸಲಾಗಿದೆ.

2016ರಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ಈ ಯೋಜನೆ ಅನುಷ್ಠಾನಗೊಂಡಿದ್ದು, ಕಂಬಿ ಬೇಲಿಯಿಂದ ಗ್ರಾಮಸ್ಥರಿಗೆ ಆನೆ ಉಪಟಳದಿಂದ ಶಾಶ್ವತ ಪರಿಹಾರ ದೊರಕುವ ಭರವಸೆಯಿದೆ. ಇದಕ್ಕಾಗಿ ಬೇಲಿಯನ್ನು 1.30ಕೋಟಿ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬಾಳೆಲೆ ಹೋಬಳಿಯ ದೇವನೂರು-1, ದೇವನೂರು-2, ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಮಲ್ಲೂರು, ಜಾಗಲೆ, ಕಾರ್ಮಾಡು, ಕೊಟ್ಟಗೇರಿ ಮತ್ತು ನಿಟ್ಟೂರು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. ಮೊದಲ ಬಾರಿಗೆ ಛತ್ತೀಸ್ ಗಡದಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು ಎನ್ನಲಾಗುತ್ತಿದೆ. ಯೋಜನೆ ಯಶಸ್ವಿಯಾಗಿದೆಯಂತೆ. ಸರ್ಕಾರ ಜಿಲ್ಲೆಯಲ್ಲಿ 126 ಕಿ.ಮೀ ನಷ್ಟು ರೈಲ್ವೆ ಕಂಬಿ ಬೇಲಿ ನಿರ್ಮಿಸಲು ಮುಂದಾದಲ್ಲಿ  ಕೊಡಗಿನಲ್ಲಿ ಆನೆ ಹಾವಳಿಯನ್ನು ತಡೆಯಬಹುದು. ಇದಕ್ಕೆ ಸುಮಾರು 176 ಕೋ.ರೂ.ತಗುಲಲಿದೆ.

ಒಟ್ಟಿನಲ್ಲಿ ಆನೆ ಹಾವಳಿ ತಡೆಗೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಂಡರೆ ಒಳ್ಳೆಯದು ಎನ್ನುವುದು ಅಲ್ಲಿನ ಗ್ರಾಮಸ್ಥರ ಅಭಿಪ್ರಾಯವಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: