ಮೈಸೂರು

ಗೋ ಹತ್ಯೆ ನಿಷೇಧವಾದ ಹಿನ್ನೆಲೆ : ಮೃಗಾಲಯದಲ್ಲಿರುವ ಪ್ರಾಣಿಗಳ ಮೇಲೆ ಪ್ರಭಾವ ಸಾಧ್ಯತೆ

ಮೈಸೂರು,ಜ.19:- ರಾಜ್ಯಾದ್ಯಂತ ಗೋ ಹತ್ಯೆ ನಿಷೇಧವಾದ ಹಿನ್ನೆಲೆಯಲ್ಲಿ ಅದರ ನೇರ ಪರಿಣಾಮ ಶ್ರೀ ಸಾಮಾನ್ಯರ ಮೇಲಷ್ಟೇ ಅಲ್ಲ ಮೃಗಾಲಯದಲ್ಲಿರುವ ಪ್ರಾಣಿಗಳ ಮೇಲೂ ಬೀರಿದೆ.
ಮೃಗಾಲಯದಲ್ಲಿದ್ದ ಪ್ರಾಣಿಗಳು ಇಷ್ಟು ದಿನ ಗೋಮಾಂಸ ಸೇವಿಸುತ್ತಿತ್ತು, ಇನ್ನು ಮುಂದೆ ಕೋಳಿ ಮಾಂಸ ನೀಡಲಾಗುತ್ತಿದೆ. ಬಾಯ್ಲರ್ ಕೋಳಿಗಳನ್ನು ಮನುಷ್ಯನೇ ಸಾಕಾಣಿಕೆ ಮಾಡುವ ಕಾರಣ ಅದರ ಬೆಳವಣಿಗೆಗೆ ಕೃತಕ ಪ್ರೋಟೀನ್, ಹಾರ್ಮೋನ್ ಬದಲಾವಣೆ ಔಷಧಗಳನ್ನು ನೀಡಲಾಗಿರುತ್ತದೆ. ಹಾಗಾಗಿ ಇದರ ಪರಿಣಾಮ ಝೂನಲ್ಲಿರುವ ಪ್ರಾಣಿಗಳ ಮೇಲೂ ಬೀರುವ ಸಾಧ್ಯತೆಗಳು ದಟ್ಟೈಸಿವೆ.
ಈ ಕುರಿತು ಮಾತನಾಡಿರುವ ಪಶು ವೈದ್ಯ ಡಾ. ನಾಗರಾಜ್ ಪ್ರಾಣಿಗಳು ಬಾಯ್ಲರ್ ಚಿಕನ್ ಸೇವನೆ ಮಾಡುವುದರಿಂದ ಅದರ ಪರಿಣಾಮವು ದೀರ್ಘಾವಧಿಯಲ್ಲಿ ಗೊತ್ತಾಗಲಿದೆ ಎಂದಿದ್ದಾರೆ. ಪ್ರಾಣಿಗಳ ಆಯುಷ್ಯ ಹತ್ತರಿಂದ ಹನ್ನೆರಡು ವರ್ಷಗಳಾಗಿವೆ. ಯಾವುದೇ ಆಹಾರವಾಗಲಿ ಅದರ ಪರಿಣಾಮ ಧನಾತ್ಮಕವಾಗಿದೆಯೋ ಅಥವಾ ಋಣಾತ್ಮಕವಾಗಿ ಪರಿಣಾಮ ಬೀರಿದೆಯೋ ಎಂಬುದನ್ನು ತಿಳಿಯಲು ಕನಿಷ್ಠ ಒಂದರಿಂದ ಎರಡು ವರ್ಷ ಬೇಕಾಗುತ್ತದೆ. ಹಾಗಾಗಿ ಗೋಮಾಂಸದ ಬದಲಾಗಿ ಚಿಕನ್ ನೀಡುತ್ತಿರುವುದರಿಂದ ಒಳ್ಳೆಯದಾಗಿದೆಯೋ ಅಥವಾ ಕೆಟ್ಟದ್ದಾಗಿದೆಯೋ ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ ಎನ್ನುತ್ತಾರೆ.
ಚಿಕನ್ ನೀಡುವುದೇ ಆದರೆ ಪ್ರಾಣಿಗಳಿಗೆ ನೈಸರ್ಗಿಕ ಆಹಾರ ತಿಂದು ಬೆಳೆದ ನಾಟಿ ಕೋಳಿಗಳನ್ನು ನೀಡುವುದು ಒಳ್ಳೆಯದು. ಆದರೆ, ನಾಟಿ ಕೋಳಿ ಬೆಲೆ ದುಬಾರಿಯಾಗಿರುವುದರಿಂದ ಪ್ರಾಣಿಗಳ ನಿರ್ವಹಣೆ ಕಷ್ಟವಾಗಲಿದೆ.
ಮನುಷ್ಯನೇ ಸಾಕಾಣಿಕೆ ಮಾಡುವ ಬಾಯ್ಲರ್ ಕೋಳಿಗಳ ಸೇವನೆಯಿಂದಾಗಿ ಪ್ರಾಣಿಗಳ ದೇಹದ ಮೇಲೆ ದೀರ್ಘಾವಧಿಯಲ್ಲಿ ಋಣಾತ್ಮಕ ಪರಿಣಾಮ ಬೀರುವುದು ಭಾಗಶಃ ನಿಜವಾಗಬಹುದು. ಮುಂದಿನ ದಿನಗಳಲ್ಲಿ ಪ್ರಾಣಿಗಳಿಗೆ ಮಾತ್ರ ಗೋಮಾಂಸ ಪೂರೈಕೆ ಮಾಡುವಂತೆ ಸ್ವಲ್ಪ ನಿಯಮ ಬದಲಾವಣೆ ಮಾಡಿಕೊಂಡರೆ ಸೂಕ್ತ ಎಂದಿದ್ದಾರೆ.
ನಿರ್ವಹಣೆ ಮಾಡಲು ಸಾಧ್ಯವಾಗದ ಗೋವುಗಳು, ಹದಿನಾಲ್ಕು ವರ್ಷ ದಾಟಿದ ಎಮ್ಮೆಗಳು, ಗಂಭೀರವಾಗಿ ಗಾಯಗೊಂಡಿರುವ ರಾಸುಗಳನ್ನು ವಧೆ ಮಾಡಿ ಅದರ ಮಾಂಸವನ್ನು ಮೃಗಾಲಯದ ಪ್ರಾಣಿಗಳಿಗೆ ಪೂರೈಕೆ ಮಾಡಲು ಅನುಮತಿ ನೀಡಿದರೆ ಉತ್ತಮ. ಕುರಿ, ಮೇಕೆ, ಕೋಳಿ, ಹಂದಿ ಇತರೆ ಪ್ರಾಣಿಗಳ ಮಾಂಸಕ್ಕೆ ಹೋಲಿಸಿದರೆ ಗೋಮಾಂಸವು ಒಂದು ಸಮತೋಲನ ಆಹಾರವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಅಂಶಗಳು ಹೆಚ್ಚಾಗಿರುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ಗೋಮಾಂಸವನ್ನು ಬ್ಯಾಲೆನ್ಸ್ಡ್ ಡಯೆಟ್ ಫುಡ್ ಎಂದು ಹೇಳಲಾಗುತ್ತದೆ. ಕುರಿಗಿಂತ ಕಡಿಮೆ ಕೊಬ್ಬು ಗೋಮಾಂಸದಲ್ಲಿರುತ್ತದೆ. ಬೆಲೆ ಕೂಡ ಅಗ್ಗವಾಗಿರುವುದರಿಂದ ಪ್ರಾಣಿಗಳ ನಿರ್ವಹಣೆ ಸುಲಭವಾಗುತ್ತದೆ. ಕೋಳಿಗಳ ಸೇವೆ ಅನೈಸರ್ಗಿಕ ಎಂದು ಹೇಳುವುದು ಕಷ್ಟ. ಏಕೆಂದರೆ ಹುಲಿ, ಸಿಂಹಗಳ ಕೈಗೆ ಪಕ್ಷಿಗಳು ಸಿಗದ ಕಾರಣ ಅವನ್ನು ತಿನ್ನುವುದಿಲ್ಲ. ಒಂದು ವೇಳೆ ನವಿಲುಗಳು, ಕಾಡು ಕೋಳಿಗಳು ಕೈಗೆ ಸಿಕ್ಕರೆ ಖಂಡಿತ ಅವು ಬೇಟೆಯಾಡಿ ತಿನ್ನುತ್ತವೆ ಎಂದು ಮಾಹಿತಿ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: