ಪ್ರಮುಖ ಸುದ್ದಿಮೈಸೂರು

ಏಪ್ರಿಲ್ ನಲ್ಲಿ ದಸರಾ ವಸ್ತುಪ್ರದರ್ಶನ ಮಾದರಿಯಲ್ಲಿ `ಬೇಸಿಗೆ ಮೇಳ ಅಥವಾ ಉತ್ಸವ’: ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್ ಕುಮಾರ್ ಗೌಡ

ಮೈಸೂರು,ಜ.19-ದಸರಾ ಸಂದರ್ಭದಲ್ಲಿ ವಸ್ತುಪ್ರದರ್ಶನ ನಡೆಯುತ್ತಿದ್ದ ಮಾದರಿಯಲ್ಲೇ `ಬೇಸಿಗೆ ಮೇಳ ಅಥವಾ ಬೇಸಿಗೆ ಉತ್ಸವ’ ವನ್ನು ಏಪ್ರಿಲ್ ತಿಂಗಳಲ್ಲಿ ಆಯೋಜಿಸಲಾಗುವುದು ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್ ಕುಮಾರ್ ಗೌಡ ಹೇಳಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ 145ನೇ ಆಡಳಿತ ಮಂಡಳಿ ಸಭೆಯು ಇಂದು ದಸರಾ ವಸ್ತುಪ್ರದರ್ಶನದ ಆವರಣದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ `ಬೇಸಿಗೆ ಮೇಳ ಅಥವಾ ಉತ್ಸವ’ವನ್ನು ಮಾಡಲು ತೀರ್ಮಾನಿಸಲಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೇಮಂತ್ ಕುಮಾರ್ ಗೌಡ ಅವರು, 2012 ರಲ್ಲಿ ವಸ್ತುಪ್ರದರ್ಶನದಲ್ಲಿ ಬೇಸಿಗೆ ಮೇಳ ನಡೆದಿತ್ತು. ಆ ಬಳಿಕ ಪ್ರಾಧಿಕಾರ ಬೇಸಿಗೆ ಮೇಳ ಮಾಡಲು ಪ್ರಯತ್ನಿಸಿದ್ದರೂ ಚುನಾವಣೆ, ಬರ ಇತ್ಯಾದಿ ಕಾರಣಗಳಿಂದ ಕಳೆದ 8 ವರ್ಷಗಳಿಂದ ಬೇಸಿಗೆ ಮೇಳ ನಡೆದಿಲ್ಲ. ಈ ಬಾರಿ ಕೋವಿಡ್ ಕಾರಣದಿಂದ ಪ್ರಾಧಿಕಾರದಿಂದ ವಸ್ತುಪ್ರದರ್ಶನ ಆಗಿಲ್ಲ. ಹೀಗಾಗಿ ದಸರಾ ಸಂದರ್ಭದಲ್ಲಿ ವಸ್ತುಪ್ರದರ್ಶನ ನಡೆಯುತ್ತಿದ್ದ ಮಾದರಿಯಲ್ಲೇ ಏಪ್ರಿಲ್ ನಲ್ಲಿ `ಬೇಸಿಗೆ ಮೇಳ, ಬೇಸಿಗೆ ಉತ್ಸವ’ ಮಾಡಲು ನಿರ್ಧರಿಸಲಾಗಿದೆ ಎಂದರು.

ಬೇಸಿಗೆ ಮೇಳ ಅಥವಾ ಉತ್ಸವವನ್ನು ಹೊಸ ಪರಿಕಲ್ಪನೆಯಲ್ಲಿ ಮಾಡಲು ನಿರ್ಧರಿಸಲಾಗಿದ್ದು, ಬೇರೆ ಬೇರೆ ರಾಜ್ಯಗಳಿಂದ ಹೊಸ ಉತ್ಪನ್ನಗಳನ್ನು ತರಿಸುವುದು, ಸಾಂಸ್ಕೃತಿಕ ಕಾರ್ಯಕ್ರಮ, ನೂತನ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

`ಮೈಸೂರು ಹಾತ್’ ಬೃಹತ್ ಕಾರ್ಯಕ್ರಮ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು `ಮೈಸೂರು ಹಾತ್’ ಬೃಹತ್ ಕಾರ್ಯಕ್ರಮದ ಮೂಲಕ ವರ್ಷದ 365 ದಿನಗಳು ಕಾಲ ವಸ್ತುಪ್ರದರ್ಶನ ನಡೆಸಬೇಕೆಂದು ಈ ಹಿಂದೆ ಇದ್ದಂತಹ ಪ್ರಾಧಿಕಾರದ ಅಧ್ಯಕ್ಷರು ಪ್ರಯತ್ನಿಸಿದ್ದರು. ಅದಕ್ಕಾಗಿ ಸುಮಾರು 145 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿದ್ದರು. ಅದಕ್ಕೆ ಪ್ರಾಥಮಿಕ ಹಂತದಲ್ಲಿ ಹಣ ಬಿಡುಗಡೆಯಾಗಿತ್ತು. ಆದರೆ ಕಾರಣಾಂತರಗಳಿಂದ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಯೋಜನೆ ಕಾರ್ಯರೂಪಕ್ಕೆ ಬರಲು ಇರುವ ಸಮಸ್ಯೆಯನ್ನು ಬಗೆಹರಿಸಿ ಆ ಯೋಜನೆಗೆ ಚಾಲನೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ವಸ್ತುಪ್ರದರ್ಶನದ ಪಾರ್ಕಿಂಗ್ ಜಾಗದಲ್ಲಿ ರೈತರು ತರಕಾರಿ ವ್ಯಾಪಾರ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸಂದರ್ಭದಲ್ಲಿ ತಾತ್ಕಲಿಕವಾಗಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಅವರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಾಧಿಕಾರದ ವ್ಯಾಪ್ತಿಗೆ ಬರುವ ಜಾಗವನ್ನು ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸುವ ಕಾರ್ಯ ಮಾಡಿ ಕಾಂಪೌಡ್ ಹಾಕಲಾಗುವುದು ಎಂದು ಇದೇ ವೇಳೆ ಹೇಳಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಉಪಾಧ್ಯಕ್ಷ ಅನಿಲ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಗಿರೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್.ಎಂ.ಯಾದವಗಿರಿ, ಕಿರಿಯ ಅಭಿಯಂತರರಾದ ಕೆ.ಸಿ.ಮಹದೇವಪ್ಪ, ಬಿ.ಪ್ರಕಾಶ್ ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: