ಮೈಸೂರು

ಜ್ಯೋತಿಷ್ಯ ಶಾಸ್ತ್ರವೂ ಒಂದು ವಿಜ್ಞಾನ : ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ಹವಾಮಾನ ಇಲಾಖೆಯಂತೆಯೇ ಜ್ಯೋತಿಷ್ಯ ಶಾಸ್ತ್ರವೂ ಗ್ರಹಗತಿಗಳ ಬಗ್ಗೆ ತಿಳಿಸಲಿದ್ದು, ಜ್ಯೋತಿಷ್ಯವು ಒಂದು ರೀತಿಯ ವಿಜ್ಞಾನವಾಗಿದೆ ಎಂದು ತುಮಕೂರು ಹಿರೇಮಠ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಭಾನುವಾರ ಮೈಸೂರಿನ  ಕಲಾಮಂದಿರದಲ್ಲಿ ಮಾಯಕಾರ ಗುರುಕುಲ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಜ್ಯೋತಿಷ್ಯ ಹಾಗೂ ಹಸ್ತ ಸಾಮುದ್ರಿಕ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹವಾಮಾನ ಇಲಾಖೆ ಪರಿಸರದಲ್ಲಾಗುವ ಬದಲಾವಣೆ, ಮಳೆ, ಬಿಸಿಲು, ಗಾಳಿ, ವಾಯುಭಾರ ಕುಸಿತದ ವರದಿಯನ್ನು ನೀಡುವಂತೆ ಜ್ಯೋತಿಷ್ಯಶಾಸ್ತ್ರ ಗುರು, ಶುಕ್ರ, ಶನಿ, ರಾಹುಕೇತುಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುತ್ತದೆ. ಹಾಗಾಗಿ ನಾನು ಜ್ಯೋತಿಷ್ಯಶಾಸ್ತ್ರ ನಂಬುತ್ತೇನೆ. ಜ್ಯೋತಿಷ್ಯದ ಹೆಸರಿನಲ್ಲಿ ಭವಿಷ್ಯ ಹೇಳುತ್ತೇನೆ ಎಂದು ಬುರುಡೆ ಬಿಡುವವರನ್ನು ನಂಬುವುದಿಲ್ಲ. ಭವಿಷ್ಯ ಯಾರ ಕೈಯ್ಯಲ್ಲೂ ಇಲ್ಲ. ಅದು ನಮ್ಮ ಶ್ರಮದ ಮೇಲೆ ನಿಂತಿದೆ ಎಂದು ಹೇಳಿದರು.
ಜ್ಯೋತಿಷ್ಯ ಶಾಸ್ತ್ರ ಸನಾತನವಾದುದು ಅದನ್ನು 100 ಜನ ಭಗವಾನ್‍ಗಳು ಬಂದರೂ ನಾಶಮಾಡಲು ಸಾಧ್ಯವಿಲ್ಲ. ಗುಣಾತ್ಮಕ ಚಿಂತನೆ ಹಾಗೂ ವರ್ತನೆಯನ್ನು ಸಕಲರೂ ರೂಢಿಸಿಕೊಳ್ಳಬೇಕಾಗಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ಒದಗಿಸಿದಲ್ಲಿ ವೃದ್ಧಾಶ್ರಮ ವ್ಯವಸ್ಥೆ ತೊಡೆದು ಹೋಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಷಡಕ್ಷರಿಸ್ವಾಮಿ ಎಸ್.ಕೃಷ್ಣಕುಮಾರ್ ಅವರ ಭಾವ ಭಾವದ ವಿಸ್ಮಯ ಎಂಬ ಜ್ಯೋತಿಷ್ಯ ಶಾಸ್ತ್ರದ ಕೃತಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್, ಪಡುವಲು ವಿರಕ್ತಮಠ ಮಹದೇವಸ್ವಾಮಿ, ಹುಕ್ಕೇರಿ ಮಠದ ಸ್ವಾಮೀಜಿ, ಶಿವರಾತ್ರೀಶ್ವರ ಪಂಚಾಂಗ ಕರ್ತರು ಕೆ.ಜಿ.ಪುಟ್ಟಹೊನ್ನಯ್ಯ, ಸರಕಾರಿ ಮಹಾರಾಜ ಸಂಸ್ಕೃತ ಮಹಾವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಮಲ್ಲಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: