ಕರ್ನಾಟಕಪ್ರಮುಖ ಸುದ್ದಿಮೈಸೂರು

ಸರ್ಕಾರಿ ಷೇರುಗಳಿರುವ ಸಹಕಾರ ಸಂಸ್ಥೆಗಳಿಗೆ ಕಾರ್ಯಕರ್ತರ ನಾಮಿನೇಷನ್; ಸಚಿವ ಸೋಮಶೇಖರ್

ಮೈಸೂರು,ಜ.19:- ಟಿ.ನರಸೀಪುರ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ತಾಲೂಕು ಘಟಕದ ವಿವಿಧ ಪ್ರಮುಖರು, ಪದಾಧಿಕಾರಿಗಳ ಸಭೆ ನಡೆಸಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಂತಹ ವೇಳೆ ಡಿಸಿಸಿ ಬ್ಯಾಂಕ್ ಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ರೈತರಿಗೆ ಸಾಲ ವಿತರಣೆ ವಿವರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಜೊತೆಗೆ ಅಲ್ಲಿನ ಪಕ್ಷದ ಕಚೇರಿಗಳಿಗೂ ಹೋಗಿ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿ ಪರಿಹರಿಸುವ ಕಾರ್ಯವನ್ನು ಮಾಡಿದ್ದೇನೆ. ಸೋಮವಾರ ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ಪಾಂಡವಪುರ ಬಿಜೆಪಿ ಕಚೇರಿಗೂ ಭೇಟಿ ನೀಡಿ ಸಭೆ ನಡೆಸಿದ್ದೇನೆ. ಪಕ್ಷ ಸಂಘಟನೆಯೂ ನನ್ನ ಗುರಿಯಲ್ಲೊಂದಾಗಿದ್ದು, ಅದಕ್ಕೂ ಒತ್ತುಕೊಡುತ್ತೇನೆ ಎಂದು ತಿಳಿಸಿದರು.

ಸರ್ಕಾರಿ ಷೇರುಗಳಿರುವ ಸಹಕಾರ ಸಂಸ್ಥೆಗಳಿಗೆ ಕಾರ್ಯಕರ್ತರ ನಾಮಿನೇಷನ್

ಸರ್ಕಾರಿ ಷೇರು ಇರುವ ಸಹಕಾರ ಸಂಸ್ಥೆಗಳಲ್ಲಿ ಕಾರ್ಯಕರ್ತರ ನಾಮಿನೇಷನ್ ಮಾಡಲಾಗುವುದು. ಆ ಬಗ್ಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಸಾಫ್ಟ್‌ವೇರ್ ನಿಂದ ಕೆಟಗರಿ ಆಯ್ಕೆ; ಬದಲಾವಣೆ ಅಧಿಕಾರ ನಮಗಿಲ್ಲ

ಟಿ.ನರಸೀಪುರ ತಾಲೂಕಿನಲ್ಲಿ ಹಲವಾರು ಮಂದಿ ಗೆದ್ದಿದ್ದೀರ. ಆದರೆ, ಕೆಟಗರಿ ರಚಿಸುವಲ್ಲಿ ತಾಂತ್ರಿಕ ತೊಡಕಾಗಿದೆ. ಕಾರಣ, ಯಾವ ಯಾವ ಕ್ಷೇತ್ರಗಳಲ್ಲಿ ಇದುವರೆಗೆ ಯಾವ ಕೆಟಗರಿಗೆ ಅವಕಾಶ ಲಭಿಸಿಲ್ಲವೋ, ಅಂಥವರಿಗೆ ಅವಕಾಶ ಕೊಡುವಂತಹ ಸಾಫ್ಟ್‌ವೇರ್ ಅನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ. ಕೆಟಗರಿ ತೀರ್ಮಾನದ ಅಧಿಕಾರವನ್ನು ನಮಗೇ ಕೊಡಬೇಕೆಂದು ಎಲ್ಲ ಸಚಿವರು ಮನವಿ ಮಾಡಿದರೂ ಸಹ ಚುನಾವಣಾ ಆಯೋಗದ ತೀರ್ಮಾನವಾಗಿರುವುದರಿಂದ ಏನನ್ನೂ ಮಾಡಲಾಗದು ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಸಂಬಂಧ ಸಹ ನಾನು ಚರ್ಚೆ ಮಾಡಿದ್ದೇನೆ. ಆದರೆ, ಗ್ರಾಮ ಪಂಚಾಯಿತಿಗಳಿಗೆ ಸುಮಾರು 25 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗುತ್ತದೆ. ಇದರ ನೇರ ಜವಾಬ್ದಾರಿ ಶಾಸಕರಿಗೆ ಹೋಗುತ್ತದೆ. ಆದರೆ, ಉಸ್ತುವಾರಿ ಸಚಿವರಿಗೂ ಅನುದಾನ ಬಳಕೆಯ ಜವಾಬ್ದಾರಿಯನ್ನು ಕೊಡುವಂತೆ ನಾವು ಮಂತ್ರಿಗಳು ಕೇಳಿದ್ದೇವೆ. ಇದರಿಂದ ಅನುದಾನ ಬಳಕೆ ಬಗ್ಗೆ ಗಮನಹರಿಸಬಹುದಾಗಿತ್ತು. ಆದರೆ, ಅದೂ ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಲೋಕೇಶ್ ನಾಯಕ್, ರಾಜ್ಯ ಹಿರಿಯ ಕಾರ್ಯಕಾರಿಣಿ ಸದಸ್ಯರಾದ ಕರೋಟಿ ಮಹದೇವಯ್ಯ, ವಿಧಾನಪರಿಷತ್ ಮಾಜಿ ಸದಸ್ಯರಾದ ಸಿ. ರಮೇಶ್, ಮಾಜಿ ಶಾಸಕರಾದ ಬಾರ್ತಿ ಶಂಕರ್, ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಎಂ. ಸೇರಿದಂತೆ ಅನೇಕ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: