ಮೈಸೂರು

ಜಾನಪದ ಕಲಾ ಶಿಬಿರ ಮುಗಿಲು ಮುಟ್ಟಿದೆ ಚಿಣ್ಣರ ಸಂಭ್ರಮ

ಮೈಸೂರಿನ ವಿ-ಕೇರ್ ಸಂಸ್ಥೆಗಳು ಕಳೆದ ಮೂರು ದಿನಗಳಿಂದ ಗ್ರಾಮೀಣ ಚಿಣ್ಣರಿಗಾಗಿ ಉಚಿತವಾಗಿ ನಡೆಸುತ್ತಿರುವ ಜಾನಪದ ಕಲಾ ಶಿಬಿರ ಮಕ್ಕಳ ಸಂಭ್ರಮ ಮುಗಿಲು ಮುಟ್ಟಿದೆ. ಮಂಡ್ಯದ ನುರಿತ ಜಾನಪದ ಕಲಾವಿದ, ತರಬೇತುದಾರ  ಸುಂದರೇಶ್, ಸಿದ್ದರಾಜು, ಬೆಳವಾಡಿ ಕಾಲೋನಿಯ ಮಹಾದೇವ  ಮಕ್ಕಳಿಗೆ ಹೊಸತಾದ ನಗಾರಿ, ವೀರಗಾಸೆ, ಕಂಸಾಳೆ,ಪಟ ಕುಣಿತ,ಜಾನಪದ ಗೀತೆಗಳು ಮೊದಲಾದ ಕಲಾಪ್ರಕಾರಗಳನ್ನು ಪರಿಚಯಿಸಿ ತಾಲೀಮು ನಡೆಸುತ್ತಿದ್ದಾರೆ.  ಇವರೊಂದಿಗೆ ಒಡನಾಡಿಯ ಯೋಗ ಶಿಕ್ಷಕಿ  ಮಹಾಲಕ್ಷ್ಮಿ ಮಕ್ಕಳನ್ನು ಯೋಗದಲ್ಲಿ ತೊಡಗಿಸುತ್ತಿದ್ದರೆ, ಬ್ಲ್ಯಾಕ್ ಬೆಲ್ಟ್ ಕರಾಟೆ ಪ್ರವೀಣೆ ಮೋಹನಕುಮಾರಿ ಸ್ವಯಂರಕ್ಷಣೆಗಾಗಿ ಕರಾಟೆಯನ್ನು ಹೇಳಿಕೊಡುತ್ತಿದ್ದಾರೆ.

ಬಾಲ್ಯವಿವಾಹ, ಪರಿಸರ ರಕ್ಷಣೆ, ಮೊದಲಾದವುಗಳ ಕುರಿತು ಜಾಗೃತಿ ಹೆಚ್ಚಿಸುವ ಹಾಡುಗಳನ್ನು ಕಲಿಸಲಾಗುತ್ತಿದೆ. ‘ದಿನಕ್ಕೊಂದು ಅರಿವು’ ಕಾರ್ಯಕ್ರಮದಡಿ ಅಗ್ನಿಶಾಮಕ ದಳವು  ಶಿಬಿರದ ಆವರಣದೊಳಕ್ಕೆ ಬಂದಾಗ ಮಕ್ಕಳ ಸಡಗರ ತಾರಕಕ್ಕೇರಿತ್ತು.  ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಮಹಾದೇವ್  ಮಕ್ಕಳಿಗೆ ಬೆಂಕಿಯ ವಿವಿಧ ಸ್ವರೂಪಗಳು ಹಾಗೂ ಅವುಗಳನ್ನು ಆರಿಸಲು ಅನುಸರಿಸುವ ವಿವಿಧ ತಂತ್ರಗಳನ್ನು ವಿವರಿಸಿದ್ದಲ್ಲದೇ ಮೈನವಿರೇಳಿಸುವ ಅಗ್ನಿಶಾಮಕ ದಳದ ಕಾರ್ಯವೈಖರಿಯನ್ನು ಪ್ರಾತ್ಯಕ್ಷಿಕೆಯ ಮೂಲಕ  ಸಾದರಪಡಿಸುತ್ತಿದ್ದುದ್ದನ್ನು ಮಕ್ಕಳೂ ಗ್ರಾಮದವರೂ ಕಣ್ಣರಳಿಸಿ ನೋಡಿ ಸಂಭ್ರಮಿಸಿದರು. ಅಲ್ಲದೇ ಅಗ್ನಿಶಾಮಕ ದಳವು ಆಗಸದಲ್ಲಿ ನೀರಿನ  ಚಿತ್ತಾರವೇರ್ಪಡಿಸಿ ಕೃತಕ ಮಳೆ ತರಿಸಿದಾಗ ಬಿಸಿಲ ಬೇಗೆಯಲ್ಲಿದ್ದ ಎಲ್ಲಾ ಮಕ್ಕಳು ಅದರಡಿ ಕುಣಿದು ಕುಪ್ಪಳಿಸಿದರು.  ಈ ಶಿಬಿರದಲ್ಲಿ ಮಕ್ಕಳ ದೈಹಿಕ ಹಾಗೂ ಮಾನಸಿಕ ಶಕ್ತಿ ಬಿಸಿಲಿನಿಂದಾಗಿ ಕುಂದದಿರುವ ಹಾಗೆ ನೋಡಿಕೊಳ್ಳವಲ್ಲಿ ವಿ-ಕೇರ್ ಸಂಸ್ಥೆಯ ಡಾ.ಕುಮುದಿನಿ ಅಚ್ಚಿಯವರು ವಿಶೇಷ ಆಸ್ತೆ ವಹಿಸಿ ಶಾಲೆಯ ಬಿಸಿಯೂಟದೊಡನೆ ಸಾಕಷ್ಟು ವಿವಿಧ  ಹಣ್ಣು,ಗಳು, ಹೆಚ್ಚಿನ ತರಕಾರಿ,ತಂಪು ಪಾನೀಯ, ಹಾಗೂ ಉತ್ಕೃಷ್ಟ ತಿನಿಸುಗಳನ್ನು ಸಹೃದಯ ಸ್ನೇಹಿತರ ಸಹಕಾರದೊಡನೆ ಒದಗಿಸುತ್ತಿದ್ದಾರೆ. ಸೋಮವಾರದ ಸಂವಾದ ಕಾರ್ಯಕ್ರಮವನ್ನು ಉರಗಪ್ರೇಮಿ ಹಾಗೂ ನಗರಪಾಲಿಕೆಯ ಸದಸ್ಯ ಸ್ನೇಕ್ ಶ್ಯಾಮ್ ನಡೆಸಿಕೊಡಲಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: