ದೇಶಪ್ರಮುಖ ಸುದ್ದಿ

ಪುಣೆಯ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಅಗ್ನಿ ಅವಘಡ

ಪುಣೆ,ಜ.21-ಕೊರೊನಾ ಸೋಂಕಿಗೆ `ಕೋವಿಶೀಲ್ಡ್’ ಲಸಿಕೆಯನ್ನು ತಯಾರಿಸುತ್ತಿರುವ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಪುಣೆ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಮಹಾರಾಷ್ಟ್ರದ ಪುಣೆಯಲ್ಲಿರುವ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಗೇಟ್ ನಂಬರ್ 1 ರಲ್ಲಿರುವ ಕಟ್ಟಡದ 2ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಬೆಂಕಿ ಹೊತ್ತುಕೊಂಡಿದೆ.

ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ 8 ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಅಗ್ನಿ ಅವಘಡ ಸಂಭವಿಸಿರುವ ಸ್ಥಳದಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕೆಲಸ ನಡೆಯುತ್ತಿರಲಿಲ್ಲ. ಹೀಗಾಗಿ ಲಸಿಕೆ ತಯಾರಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಈ ಬೆಂಕಿ ಅನಾಹುತಕ್ಕೆ ಇನ್ನು ಕಾರಣ ತಿಳಿದು ಬಂದಿಲ್ಲ.

ಭಾರತದ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಬ್ರಿಟನ್ ನ ಆಕ್ಸ್ ಫರ್ಡ್ ವಿವಿಯೊಂದಿಗಿನ ಸಹಭಾಗಿತ್ವದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುತ್ತಿದೆ. ಪುಣೆಯ ಮಂಜಾರಿ ಪ್ರದೇಶದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಈ ಸಂಸ್ಥೆಯ ಘಟಕವಿದ್ದು, ಪ್ರಸ್ತುತ ಇದೇ ಘಟಕದಲ್ಲಿ ಕೋವಿಶೀಲ್ಡ್ ಲಸಿಕೆ ತಯಾರಿಸಲಾಗುತ್ತಿದೆ.

ಪ್ರಸ್ತುತ ಅಗ್ನಿ ಅವಘಡ ಸಂಭವಿಸಿರುವ ಕಟ್ಟಡಕ್ಕೂ ಲಸಿಕೆ ತಯಾರಾಗುವ ಕಾಂಪ್ಲೆಕ್ಸ್ ಗೂ ಸಾಕಷ್ಟು ದೂರವಿದ್ದು, ಇದರಿಂದ ಲಸಿಕೆ ತಯಾರಿಕೆ ಮೇಲೆ ಯಾವುದೇ ರೀತಿಯ ಪರಿಣಾಮವಿಲ್ಲ ಎಂದು ಹೇಳಲಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: