ದೇಶಪ್ರಮುಖ ಸುದ್ದಿ

ವಿವಾದಾತ್ಮಕ ಕೃಷಿ ಕಾನೂನುಗಳನ್ನು 18 ತಿಂಗಳು ಅಮಾನತುಗೊಳಿಸುವ ಸರ್ಕಾರದ ಪ್ರಸ್ತಾವ ತಿರಸ್ಕರಿಸಿದ ರೈತ ಸಂಘಟನೆ

ದೇಶ(ನವದೆಹಲಿ)ಜ.22:- ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು 18 ತಿಂಗಳು ಅಮಾನತುಗೊಳಿಸುವ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಂಟಿ ಸಮಿತಿ ರಚಿಸುವ ಸರ್ಕಾರದ ಪ್ರಸ್ತಾವವನ್ನು ರೈತ ಸಂಘಟನೆಗಳು ತಿರಸ್ಕರಿಸಿವೆ.

ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ದೆಹಲಿಯ ಹೊರ ವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳ ಮಾತೃ ಸಂಸ್ಥೆ ‘ಸಂಯುಕ್ತ ಕಿಸಾನ್‌ ಮೋರ್ಚಾ’ ಈ ನಿರ್ಧಾರವನ್ನು ಪ್ರಕಟಿಸಿದೆ. ಸರ್ಕಾರವು ರೈತ ಸಂಘಗಳ ಮುಂದಿಟ್ಟ ಪ್ರಸ್ತಾವವನ್ನು ತಿರಸ್ಕರಿಸುವ ನಿರ್ಧಾರವನ್ನು ಸಂಯುಕ್ತ ಕಿಸಾನ್‌ ಮೋರ್ಚಾದ ಪ್ರಧಾನ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಈ ಚಳವಳಿಯಲ್ಲಿ ಇದುವರೆಗೆ ಹುತಾತ್ಮರಾದ 143 ರೈತರಿಗೆ ಸಂಘಟನೆಯು ಗೌರವ ಸಲ್ಲಿಸುತ್ತದೆ. ಈ ಆಂದೋಲನದಲ್ಲಿ ನಮ್ಮ ಒಡನಾಡಿಗಳು ನಮ್ಮನ್ನು ಅಗಲಿದ್ದಾರೆ. ಅವರ ತ್ಯಾಗ ವ್ಯರ್ಥವಾಗುವುದಿಲ್ಲ. ಈ ಕೃಷಿ ಕಾನೂನುಗಳು ರದ್ದಾಗದೇ ನಾವು ಹಿಂತಿರುಗುವುದಿಲ್ಲ, ‘ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಪೂರ್ಣವಾಗಿ ರದ್ದುಪಡಿಸುವುದು, ಎಂಎಸ್‌ಪಿಗೆ ಕಾನೂನು ರೂಪಿಸುವುದು ಚಳವಳಿಯ ಮುಖ್ಯ ಉದ್ದೇಶ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: