ದೇಶಪ್ರಮುಖ ಸುದ್ದಿ

ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮದಿನ, ಪರಾಕ್ರಮ್ ದಿವಸ್: ನೇತಾಜಿ ಅವರನ್ನು ಸ್ಮರಿಸಿದ ಗಣ್ಯರು

ನವದೆಹಲಿ,ಜ.23- `ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುವೆ’ ಎನ್ನುತ್ತ ಭಾರತೀಯರನ್ನು ಉತ್ತೇಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಆಯಾಮ ನೀಡಿದ, ಬ್ರಿಟಿಷರ ವಿರುದ್ಧ ಮೊದಲ ಸೇನಾಪಡೆ ಕಟ್ಟಿದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ 125ನೇ ಜನ್ಮದಿನವಿಂದು.

ನೇತಾಜಿ ಅವರ ಜನ್ಮದಿನವನ್ನು ಇಂದು ದೇಶಾದ್ಯಂತ `ಪರಾಕ್ರಮ್ ದಿವಸ್’ ಆಗಿ ಆಚರಿಸಲಾಗುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ನೇತಾಜಿ ಅವರನ್ನು ಸ್ಮರಿಸಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಸಂದರ್ಭದಲ್ಲಿ ಗೌರವ ಸಲ್ಲಿಸಿದ್ದಾರೆ. ಅಪ್ರತಿಮ ಧೈರ್ಯ, ಸಾಹಸ ಮೆರೆದ ರಾಷ್ಟ್ರನಾಯಕನನ್ನು ಗೌರವಿಸಲು ಪರಾಕ್ರಮ ದಿವಸವನ್ನು ನಾವೆಲ್ಲರೂ ಆಚರಿಸುತ್ತಿರುವುದು ಸಮಯೋಚಿತವಾಗಿದೆ. ಅಸಂಖ್ಯಾತ ಜನರ ಮನಸ್ಸಿನಲ್ಲಿ ದೇಶಪ್ರೇಮದ ಬೀಜ ಬಿತ್ತಿದವರು ನೇತಾಜಿಯವರು ಎಂದು ಅವರನ್ನು ಸ್ಮರಿಸಿ ಟ್ವೀಟ್ ಮಾಡಿದ್ದಾರೆ.

ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮತ್ತು ದೂರದೃಷ್ಟಿಯ ನಾಯಕ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ನೇತಾಜಿ ಶೌರ್ಯ, ದೃಢ ನಿಶ್ಚಯ ಮತ್ತು ತ್ಯಾಗವನ್ನು ವ್ಯಕ್ತಿಗತಗೊಳಿಸಿದ್ದಾರೆ. ನಮ್ಮ ತಾಯ್ನಾಡನ್ನು ಬ್ರಿಟಿಷ್ ಆಡಳಿತದ ನೊಗದಿಂದ ಮುಕ್ತಗೊಳಿಸುವಲ್ಲಿ ಅಮೂಲ್ಯವಾದ ಪಾತ್ರವನ್ನು ವಹಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ನೀಡಿದ ಅಪಾರ ಕೊಡುಗೆಗಾಗಿ ರಾಷ್ಟ್ರವು ಎಂದೆಂದಿಗೂ ಕೃತಜ್ಞರಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರು, ಗುವಾಹಟಿಯಲ್ಲಿ ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇಂದು ಕೋಲ್ಕತ್ತಾದಲ್ಲಿ ಪರಾಕ್ರಮ ದಿವಸದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

1897ರ ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಒಡಿಶಾದ ಕಟಕ್ ನಲ್ಲಿ ಜನಿಸಿದ್ದರು. ಈ ದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸಲಾಗುತ್ತಿದೆ.ನೇತಾಜಿಯವರ 125ನೇ ವರ್ಷದ ಜನ್ಮದಿನ ಇಂದು ಆಗಿರುವುದರಿಂದ ಈ ವರ್ಷವಿಡೀ ವಿಶೇಷವಾಗಿ ಆಚರಿಸಲಾಗುತ್ತಿದೆ. ಜನವರಿ 23ನ್ನು ಪ್ರತಿವರ್ಷ ಪರಾಕ್ರಮ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: