ಕರ್ನಾಟಕಪ್ರಮುಖ ಸುದ್ದಿಮೈಸೂರು

ಖುದ್ದು ಸಂಬಂಧಪಟ್ಟ ಸಚಿವರ ಬಳಿ ನಮ್ಮನ್ನು ಕರೆದೊಯ್ದು ಪರಿಹರಿಸುವ ಸಚಿವರಿದ್ದರೆ ಸೋಮಶೇಖರ್ ಆಗಿದ್ದಾರೆ; ಸಂಸದ ಪ್ರತಾಪ್ ಸಿಂಹ

ಮೈಸೂರು,ಜ.23:- ಮೈಸೂರು ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ ಉಸ್ತುವಾರಿ ಸಚಿವರಲ್ಲಿ ಎಸ್.ಟಿ.ಸೋಮಶೇಖರ್ ಅವರು ಮೊದಲಿಗರು. ಅವರು ಎಲ್ಲರಿಗೂ ಸಹಕಾರ ಹಾಗೂ ಪ್ರಾಧಾನ್ಯತೆಯನ್ನು ನೀಡುತ್ತಾರೆ ಎಂದು ಸಂಸದರಾದ ಪ್ರತಾಪ್ ಸಿಂಹ ಹೇಳಿದರು.

ಇಲ್ಲಿನ ಒಂಟಿಕೊಪ್ಪಲ್ ನಲ್ಲಿರುವ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸಂಸದರು, ಉಸ್ತುವಾರಿ ಸಚಿವರಾದ ಮೈಸೂರಿನ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಸಹಕಾರ ಕೊಡುತ್ತಿದ್ದಾರೆ. ನಾವು ಸಂಸದರು, ಶಾಸಕರು ಸೇರಿ ಯಾವುದೇ ಜನಪ್ರತಿನಿಧಿಗಳು ಯಾವುದಾದರು ಕೆಲಸಕ್ಕಾಗಿ ಸಚಿವರಿಗೆ ಮನವಿ ಮಾಡಿದರೆ, ಶಿಫಾರಸು ಪತ್ರ ಕೊಟ್ಟು, ಸಂಬಂಧಪಟ್ಟ ಸಚಿವರಿಗೆ ಕರೆ ಮಾಡಿ ಸುಮ್ಮನಾಗದೆ, ತಮ್ಮ ಜೊತೆಗೆ ನಮ್ಮನ್ನು ಆ ಸಚಿವರ ಬಳಿಯೇ ಕರೆದೊಯ್ದು ಕೆಲಸ ಮಾಡಿಸಿ ಕೊಡುತ್ತಿದ್ದಾರೆ. ಇದು ಅವರ ಬದ್ಧತೆಯನ್ನು ತೋರುತ್ತದೆ. ಅಲ್ಲದೆ, ಸಚಿವರು ಮಾತನಾಡದೆ ಕೆಲಸ ಮಾಡಿ ತೋರಿಸುವವರಾಗಿದ್ದಾರೆ. ನಾನು ಎರಡನೇ ಬಾರಿ ಸಂಸದನಾಗಿದ್ದು, ಇಷ್ಟು ಕ್ರಿಯಾಶೀಲ ಸಚಿವರನ್ನು ಕಂಡಿಲ್ಲ ಎಂದು ತಿಳಿಸಿದರು.

ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿಗೆ ಅಷ್ಟಾಗಿ ಸೀಟುಗಳಿರಲಿಲ್ಲ. ಆದರೆ, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಂಚರಿಸಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಕೊಡಿಸುವಲ್ಲಿ ಶ್ರಮ ವಹಿಸಿದ್ದಾರೆ. ಈ ಮೂಲಕ ಪಕ್ಷ ಸಂಘಟನೆಗೂ ಒತ್ತುಕೊಟ್ಟಿದ್ದಾರೆ ಎಂದು ತಿಳಿಸಿದರು.

ಕೋವಿಡ್ ಸಂಕಷ್ಟದ ಕಾಲದಲ್ಲಿ ಮೈಸೂರಿನ ಮೃಗಾಲಯದಲ್ಲಿ ಪ್ರಾಣಿಗಳನ್ನು ನಿರ್ವಹಣೆ ಮಾಡುವುದು ಕಷ್ಟಕರವಾಗಿತ್ತು. ಆದರೆ, ಅಂತಹ ಪರಿಸ್ಥಿತಿಯಲ್ಲಿ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಸ್ವತಃ ತಾವೇ ದೇಣಿಗೆ ನೀಡಿದ್ದಲ್ಲದೆ, ತಮ್ಮ ಆಪ್ತರಿಂದ, ಸಚಿವರಿಂದ ಹಾಗೂ ಕ್ಷೇತ್ರದ ಜನತೆಯಿಂದ ದೇಣಿಗೆ ಸಂಗ್ರಹಿಸಿ ಬರೋಬ್ಬರಿ 3.65 ಕೋಟಿ ರೂಪಾಯಿಯನ್ನು ನೀಡಿದ್ದಾರೆ. ಏನನ್ನೂ ಕೋರದ ಪ್ರಾಣಿಗಳಿಗೇ ಹೀಗೆ ಸಹಾಯ ಮಾಡಿದ ಉಸ್ತುವಾರಿ ಸಚಿವರು, ಇನ್ನು ಕಾರ್ಯಕರ್ತರು ಬಾಯಿಬಿಟ್ಟು ಸಹಕಾರ ಕೇಳಿದರೆ ಖಂಡಿತವಾಗಿಯೂ ನಿರಾಕರಿಸದೆ ಸಹಾಯ ಮಾಡುವರು ಎಂದು ಸಂಸದರಾದ ಪ್ರತಾಪ್ ಸಿಂಹ ಹೇಳಿದರು.

ಪಕ್ಷಕ್ಕೆ ದಾಖಲೆ ಪ್ರಮಾಣದ ನೇಮಕಾತಿ ಇತ್ತೀಚಿನ ದಿನಗಳಲ್ಲಿ ನಡೆದಿದೆ. ಇದಕ್ಕೆ ಚಾಮರಾಜ ಕ್ಷೇತ್ರ ಬಿಜೆಪಿ ಘಟಕದ ಅಧ್ಯಕ್ಷರಾದ ತನುಜಾ ಮಹೇಶ್ ಹಾಗೂ ತಂಡದವರ ಶ್ರಮ ಬಹಳವಿದೆ ಎಂದರು.

ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಅವರ ಯೋಜನೆಗಳ ಮನೆ ಮನೆಗೆ ತಲುಪಿಸಿ; ಸಚಿವ ಎಸ್ ಟಿ ಎಸ್

ಬಿಜೆಪಿ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಮಹಿಳೆಯರ ಸ್ವಾವಲಂಬನೆಗೋಸ್ಕರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಪ್ರತಿ ಮನೆಗೆ ತಲುಪಿಸುವ ಕಾರ್ಯವು ನಮ್ಮನಿಮ್ಮಿಂದ ಆಗಲಿ ಎಂದು ತಿಳಿಸಿದರು.

ನಾನು ಉಸ್ತುವಾರಿಯಾದ ಮೇಲೆ ಇಷ್ಟೊಂದು ಪ್ರಮಾಣದಲ್ಲಿ ಮಹಿಳೆಯರು ಒಂದು ಕಾರ್ಯಕ್ರಮದಲ್ಲಿ ಸೇರಿದ್ದನ್ನು ನೋಡಿರಲಿಲ್ಲ. ಈ ನಿಟ್ಟಿನಲ್ಲಿ ಕ್ಷೇತ್ರದ ಅಧ್ಯಕ್ಷರಾದ ತನುಜಾ ಅವರು ಶ್ರಮವಹಿಸಿದ್ದು ಕಾಣುತ್ತದೆ. ಇನ್ನು ಶಾಸಕರಾದ ನಾಗೇಂದ್ರ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನತೆಗೆ ಹತ್ತಿರವಾಗಿದ್ದಾರೆ. ಇನ್ನು 5 ವರ್ಷಕ್ಕೊಮ್ಮೆ ಮಾತ್ರ ಕಾಣುತ್ತಾರೆಂಬ ಆರೋಪಕ್ಕೆ ವಿರುದ್ಧವಾಗಿ ಸಂಸದರಾದ ಪ್ರತಾಪ್ ಸಿಂಹ ಅವರು ಕಾರ್ಯನಿರ್ವಹುಸುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳನ್ನು ಕ್ಷೇತ್ರಕ್ಕೆತರುವ ಮೂಲಕ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಕಾರ್ಯಕರ್ತರಿಗೆ ಸುಲಭವಾಗಿ ಲಭ್ಯವಾಗುತ್ತಿದ್ದಾರೆ. ನಗರಾಧ್ಯಕ್ಷರಾಗಿರುವ ಶ್ರೀವತ್ಸ ಅವರು ಪಕ್ಷ ಸಂಘಟನೆಯನ್ನು ಅತ್ಯುತ್ತಮವಾಗಿ ಮಾಡುತ್ತಿದ್ದಾರೆ. ನಾನು ಸಹ ಪಕ್ಷದ ಸಂಘಟನೆಗೆ ಕೈಮೀರಿ ಪ್ರಯತ್ನಿಸುವ ಮೂಲಕ ಪಕ್ಷದ ಋುಣ ತೀರಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಮಹಿಳೆಯರಿಗೋಸ್ಕರ ಇರುವ ಯೋಜನೆಗಳ ಪಟ್ಟಿ ಕೊಡುವೆ; ಸಚಿವ ಸೋಮಶೇಖರ್

ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಮಹಿಳೆಯರಿಗಾಗಿ ಏನೇನು ಯೋಜನೆಗಳಿವೆ? ಅದರಿಂದಾಗುವ ಲಾಭಗಳೇನು ಎಂಬ ಬಗ್ಗೆ ಪಟ್ಟಿಯನ್ನು ನಾನು ಇಲ್ಲಿನ ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ತನುಜಾ ಅವರಿಗೆ ಕೊಡುತ್ತೇನೆ. ಅವರು ತಮ್ಮ ತಂಡದೊಂದಿಗೆ ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ನಗರಾಧ್ಯಕ್ಷರಾದ ಶ್ರೀವತ್ಸ ಮಾತನಾಡಿ, ಕೋವಿಡ್ ಸಂಕಷ್ಟ ಕಾಲದಲ್ಲಿ ವಾರಿಯರ್ಸ್ ಮಾದರಿ ಕಾರ್ಯನಿರ್ವಹಣೆ ಮಾಡಿದ ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ವತಿಯಿಂದ ತಲಾ 3 ಸಾವಿರ ರೂಪಾಯಿ ಅನುದಾನವನ್ನು ನೂರಕ್ಕೆ ನೂರರಷ್ಟು ವಿತರಣೆ ಮಾಡಿದ್ದು ನಮ್ಮ ಸಹಕಾರ ಸಚಿವರಾದ ಸೋಮಶೇಖರ್ ಅವರು ಎಂದು ಹೇಳಲು ಹೆಮ್ಮೆಯಾಗುತ್ತದೆ. ಇಂತಹ ಅನೇಕ ಯೋಜನೆಗಳು ನಮ್ಮ ಸರ್ಕಾರದಲ್ಲಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಲ್. ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷರಾದ ಶ್ರೀವತ್ಸ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ, ರಾಜ್ಯ ಕಾರ್ಯಕಾರಿ ಸದಸ್ಯರಾದ ಮಂಜುನಾಥ್, ಚಾಮರಾಜ ಕ್ಷೇತ್ರ ಬಿಜೆಪಿ ಘಟಕದ ಅಧ್ಯಕ್ಷರಾದ ತನುಜಾ ಮಹೇಶ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

Leave a Reply

comments

Related Articles

error: