
ದೇಶಪ್ರಮುಖ ಸುದ್ದಿ
ಭಾರತ-ಚೀನಾ ಸೈನಿಕರ ನಡುವೆ ಮತ್ತೊಮ್ಮೆ ಲಘು ಸಂಘರ್ಷ
ನವದೆಹಲಿ,ಜ.25- ಭಾರತೀಯ ಸೇನೆ ಹಾಗೂ ಚೀನಾ ಸೈನಿಕರ ನಡುವೆ ಮತ್ತೊಮ್ಮೆ ಲಘು ಸಂಘರ್ಷ ನಡೆದಿದೆ. ಸಿಕ್ಕಿಂನ ನಾಕು-ಲಾ ಎಂಬಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿದೆ.
ಬಳಿಕ ರಾಜತಾಂತ್ರಿಕ ಮಾತುಕತೆಯ ಮೂಲಕ ಸ್ಥಳೀಯ ಕಮಾಂಡರ್ಗಳು ವಿವಾದವನ್ನು ಬಗೆ ಹರಿಸಿದ್ದಾರೆ ಎಂದು ಭಾರತೀಯ ಸೇನೆಯು ತಿಳಿಸಿದೆ.
ಮೇ 5ರಂದು ಪೂರ್ವ ಲಡಾಖ್ನಲ್ಲಿ ಉಭಯ ಕಡೆಯ ಮಿಲಿಟರಿ ಕದನದ ಬಳಿಕ ಸಿಕ್ಕಿಂನಲ್ಲೂ ಪ್ರಕ್ಷುಬ್ಧ ವಾತಾವರಣ ಮುಂದುವರಿದಿದೆ. ಜನವರಿ 20ರಂದು ಉತ್ತರ ಸಿಕ್ಕಿಂನ ನಾಕು-ಲಾ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಪಡೆಯು ಲಘುವಾಗಿ ಕೈ-ಕೈ ಮಿಲಾಯಿಸಿದೆ. ಬಳಿಕ ಮಾತುಕತೆಯ ಮೂಲಕ ಸ್ಥಳೀಯ ಕಮಾಂಡರ್ಗಳು ವಿವಾದವನ್ನು ಬಗೆಹರಿಸಿದ್ದಾರೆ. ವಾಸ್ತವಕ್ಕೆ ವಿರುದ್ಧವಾಗಿ ತಪ್ಪಾದ ವರದಿಗಳನ್ನು ವರದಿ ಮಾಡದಂತೆ ಮಾಧ್ಯಮಗಳನ್ನು ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಿಕ್ಕಿಂನ ವಾಸ್ತವ ಗಡಿ ಪ್ರದೇಶದಲ್ಲಿ (ಎಲ್ಎಸಿ) ಚೀನಾ ಪಡೆಗಳು ಭಾರತಕ್ಕೆ ಅತಿಕ್ರಮಿಸಲು ಪ್ರಯತ್ನಿಸಿದ್ದವು. ಚೀನಾ ಆಕ್ರಮಣವನ್ನು ಭಾರತೀಯ ಸೇನೆಯು ತಡೆದಿದೆ. ಈ ಸಂದರ್ಭದಲ್ಲಿ ಎರಡು ಕಡೆಯ ಸೇನೆಗಳು ಮುಖಾಮುಖಿಯಾದವು ಎಂದು ತಿಳಿಸಿವೆ.
ಕಳೆದ ವರ್ಷ ಪೂರ್ವ ಲಡಾಖ್ನ ಪಾಂಗಾಂಗ್ ಸರೋವರ ದಂಡೆಯಲ್ಲಿ ನಡೆದ ಸಂಘರ್ಷದ ಬಳಿಕ ಮೇ 9ರಂದು ಇದೇ ನಾಕು-ಲಾ ಪ್ರದೇಶದಲ್ಲಿ ಮುಖಾಮುಖಿಯಾಗಿದ್ದವು. ಪೂರ್ವ ಲಡಾಖ್ ಭಾಗದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಭಾನುವಾರದಂದು ಭಾರತ ಹಾಗೂ ಚೀನಾ ಮತ್ತೊಂದು ಹಂತದ ಕಮಾಂಡರ್ ಮಟ್ಟದ ಸಭೆಯನ್ನು ನಡೆಸಿತ್ತು.
ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆಯ ಮೂಲಕ ವಿವಾದ ಬಗೆ ಹರಿಸಲು ನಿರಂತರ ಪ್ರಯತ್ನ ನಡೆಸುತ್ತಿರುವ ಮಧ್ಯೆ ಪೂರ್ವ ಲಡಾಕ್ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಸೇನೆಗಳು ಸುಮಾರು ಒಂದು ಲಕ್ಷ ಸೈನಿಕರನ್ನು ನಿಯೋಜಿಸಿದೆ. (ಏಜೆನ್ಸೀಸ್, ಎಂ.ಎನ್)