ಮೈಸೂರು

ಕೋಣನೂರು-ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ಬೆಂಕಿ

ಮೈಸೂರು,ಜ.28:- ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೋಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು ಹತ್ತಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ.
ಕೃಷ್ಣರಾಜಪುರ ಗ್ರಾಮದ ಭಾಗದಲ್ಲಿ ನಿನ್ನೆ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು. ಬೆಟ್ಟದಲ್ಲಿದ್ದ ಮರ, ಗಿಡಗಳು ಭಸ್ಮವಾಗಿವೆ. ಬೆಂಕಿಯಿಂದ ಪ್ರಾಣಿ ಪಕ್ಷಿಗಳು ದಿಕ್ಕಾ ಪಾಲಾಗಿ ಓಡಿವೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಬೇಸಿಗೆ ಆರಂಭಕ್ಕೂ ಮುನ್ನವೇ ಅರಣ್ಯಕ್ಕೆ ಬೆಂಕಿ ಬಿದ್ದಿದೆ. ಜಿಂಕೆ, ನವಿಲು, ಚಿರತೆ, ಮೊಲ, ಕಾಡು ಹಂದಿ, ಕಿರುಬ ಸೇರಿ ಹಲವು ಪ್ರಾಣಿ ಪಕ್ಷಿಗಳು ಈ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತವೆ.
ಏತನ್ಮಧ್ಯೆ ಚಾಮುಂಡಿಬೆಟ್ಟದ ಅರಣ್ಯ ಹಾಗೂ ಆಯಿಷ್ ಸಮೀಪ ಕುರುಚಲು ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಮೀಪ ಬೆಳೆದಿದ್ದ ಒಣ ಹುಲ್ಲಿಗೆ ಮೊದಲು ಬೆಂಕಿ ಹೊತ್ತಿಕೊಂಡಿತ್ತು. ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ 2ಮತ್ತು ಹೆಬ್ಬಾಳು ಠಾಣೆಯ 1 ವಾಹನದಲ್ಲಿ ಸ್ಥಳಕ್ಕಾಗಮಿಸಿದ 15ಕ್ಕೂ ಹೆಚ್ಚು ಸಿಬ್ಬಂದಿಗಳು ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಚಾಮುಮಡಿಬೆಟ್ಟದ ನಂದಿಯ ಬಳಿಯೂ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದ್ದು ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳುವಷ್ಟರಲ್ಲಿಯೇ ಸ್ಥಳದಲ್ಲಿದ್ದವರು ಬೆಂಕಿ ಆರಿಸಿದ್ದರು ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: