ಮೈಸೂರು

ಭಾರತದ ಕಲೆಯನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವಾಗಬೇಕು : ಡಾ.ಹೆಚ್.ಸಿ.ಮಹದೇವಪ್ಪ

ಭಾರತದ ಶ್ರೇಷ್ಠ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸವನ್ನು ಉಳಿಸಿ, ಬೆಳೆಸುವುದಲ್ಲದೆ ವಿಶ್ವಕ್ಕೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.

ಸೋಮವಾರ ಮೈಸೂರಿನ  ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ವತಿಯಿಂದ ವಿಶ್ವ ಪಾರಂಪರಿಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ನಾಲ್ಕು ದಿನಗಳ ಪಾರಂಪರಿಕ ಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಮರಶಿಲ್ಪಿ ಜಕಣಾಚಾರಿ, ರವಿವರ್ಮನಂತಹ ಮಹಾನ್ ಕಲಾವಿದರನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ದೇಶದ ಪ್ರತಿಯೊಂದು ಗ್ರಾಮಕ್ಕೂ ಒಂದಲ್ಲಾ ಒಂದು ವಿಶೇಷ ಇತಿಹಾಸವಿದೆ. ಸಂಸ್ಕತಿ, ಕಲೆ, ಪರಂಪರೆಯಲ್ಲಿ ಭಾರತ ವಿಶೇಷ ಇತಿಹಾಸ ಹೊಂದಿದ್ದು, ಅದನ್ನು ವಿಶ್ವದೆಲ್ಲೆಡೆ ಪಸರಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಸಂಸ್ಕೃತಿ, ಪರಂಪರೆ ನಮ್ಮ ಬದುಕನ್ನು ನೇರವಾಗಿ ಪ್ರಾಚೀನ ಕಾಲಕ್ಕೆ ಕೊಂಡೊಯ್ಯುತ್ತವೆ. ಇಂದಿನ ಯುವಪೀಳಿಗೆಗೆ ಸಂವಿಧಾನ ಎಂದರೆ ಏನು ಎಂಬುದೇ ಸರಿಯಾಗಿ ತಿಳಿದಿಲ್ಲ. ನಮ್ಮ ಸಂಪದ್ಭರಿತ ಇತಿಹಾಸದ ಬಗ್ಗೆ ಅರಿವೇ ಇಲ್ಲ. ಮೊದಲು ಯುವಕರಿಗೆ ಇತಿಹಾಸದ ಬಗೆಗೆ ಅರಿವು ಮೂಡಿಸಬೇಕು. ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಬೇಕು. ಕಲಾವಿದರು ತಮ್ಮ ಕುಂಚದಲ್ಲಿ ಇತಿಹಾಸದ ನೆನಪನ್ನು ಹಿಡಿದಿಟ್ಟಿದ್ದು, ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಪುರಾತತ್ವ ಇಲಾಖೆಯ ಅಭಿವೃದ್ಧಿಗೆ ಹಾಗೂ ಸ್ಮಾರಕಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಸದಾ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೇಯರ್ ಎಂ.ಜೆ.ರವಿಕುಮಾರ್, ಉಪಮೇಯರ್ ರತ್ನ ಲಕ್ಷ್ಮಣ್, ಮೈಸೂರು ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್, ಕಾಡಾ ಅಧ್ಯಕ್ಷ ನಂಜಪ್ಪ, ಪುರಾತತ್ವ ಇಲಾಖೆಯ ನಿರ್ದೇಶಕ ಡಾ.ಗವಿಸಿದ್ದಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: