ಮೈಸೂರು

ಏ.29: ಮಹಿಳಾ ಉದ್ಯಮಶೀಲರಿಗೆ ಅಗ್ನಿ ನಾಯಕತ್ವ ಶೃಂಗ

ಪೋಷಣಾ ಮತ್ತು ಸಲಹಾಕಾರ ಸೇವಾ ಸಂಸ್ಥೆ ಬೆಂಗಳೂರು ಮೂಲದ ಅಗ್ನಿ ಲೀಡರ್ ಶಿಪ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮಹಿಳಾ ಉದ್ಯಮಶೀಲರಿಗೆ ಅಗ್ನಿ ನಾಯಕತ್ವ ಶೃಂಗ ಎಂಬ ಹೆಸರಿನ ನಾಯಕತ್ವ ಶೃಂಗವನ್ನು ಮೈಸೂರು ಚೇಂಬರ್ ಆಫ್ ಕಾಮರ್ಸ್ ನಲ್ಲಿ  ಏ.29 ರಂದು ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ನಾಯರ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸೋಮವಾರ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಸ್ಥೆ ಒಕ್ಕೂಟ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ಅಂಗವಾದ ವುಮೆನ್ ಇನ್ ಸ್ಮಾಲ್ ಎಂಟರ್ ಪ್ರೈಸ್ ಮುಂತಾದ ಸಂಸ್ಥೆಗಳು ಅಗ್ನಿ ಲೀಡರ್ ಶಿಪ್ ಸೆಂಟರ್ ನೊಂದಿಗೆ ಕೈಜೋಡಿಸಿವೆ. ಈ ಶೃಂಗದಲ್ಲಿ ಮಹಿಳಾ ಉದ್ಯಮಶೀಲರು-ಸವಾಲುಗಳು ಮತ್ತು ಅವಕಾಶಗಳು, ನಿಧಿ ಸಂಗ್ರಹಣೆ ಮತ್ತು ಹಣಕಾಸು ನಿಯಂತ್ರಣ ಎಂಬ ವಿಷಯಗಳ ಬಗ್ಗೆ ಗಮನ ಹರಿಸಲಾಗುತ್ತದೆ. 100 ಕ್ಕೂ ಹೆಚ್ಚು ಮಹಿಳಾ ಉದ್ಯಮಶೀಲರು ಈ ಶೃಂಗದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಹಿಳಾ ಉದ್ಯಮಶೀಲತೆಯಲ್ಲಿ ಅತ್ಯುತ್ತಮರಾದವರೊಂದಿಗೆ ಸಂವಾದ ನಡೆಸಲು ಈ ಕಾರ್ಯಕ್ರಮದಲ್ಲಿ ಅವಕಾಶ ಸಿಗಲಿದೆ. ಹೊಸ ಉದ್ಯಮ ಅವಕಾಶಗಳನ್ನು ಆವಿಷ್ಕರಿಸಲು, ಉದ್ಯಮ ಸಲಹೆ ಪಡೆಯಲು ಮತ್ತು ಜಾಲಗಳನ್ನು ಸೃಷ್ಟಿಸಲು ಜಂಟಿ ಯೋಜನೆಗಳ ಮೂಲಕ ಅಂತರರಾಷ್ಟ್ರೀಯ ದ್ವಿಪಕ್ಷೀಯ ಸಂಬಂಧಗಳನ್ನು ಸ್ಥಾಪಿಸುವುದು, ವಿವಿಧ ಸಂಸ್ಕೃತಿ ಮತ್ತು ಸವಾಲುಗಳನ್ನು ಅರಿತುಕೊಳ್ಳಲು ಭಾರತೀಯ ಮಹಿಳಾ ನಿಯೋಗಗಳನ್ನು ಜಗತ್ತಿನ ವಿವಿಧೆಡೆ ಒಯ್ಯುವುದು ಅಗ್ನಿ ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಕ್ರಿಸ್ಟಿಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: