ದೇಶಪ್ರಮುಖ ಸುದ್ದಿ

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ,30ರಿಂದ ಉಪವಾಸ ಸತ್ಯಾಗ್ರಹ : ಅಣ್ಣಾ ಹಜಾರೆ

ದೇಶ(ನವದೆಹಲಿ)ಜ.29:- ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಹಾರಾಷ್ಟ್ರದ ಅಹ್ಮದ್ ‌ನಗರ ಜಿಲ್ಲೆಯ ರಾಳೆಗಣಸಿದ್ಧಿಯಲ್ಲಿ ಜನವರಿ 30ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಘೋಷಿಸಿದ್ದಾರೆ.

ಅಲ್ಲದೆ ಬೆಂಬಲಿಗರೆಲ್ಲರೂ ತಮ್ಮ ತಮ್ಮ ಸ್ಥಳದಿಂದಲೇ ಪ್ರತಿಭಟನೆ ನಡೆಸುವಂತೆ ಅಣ್ಣಾ ಹಜಾರೆ ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರದ ವಿವಾದಿತ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಜೊತೆಗೆ ಹಲವು ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಈ ನಡುವೆ ಗಣರಾಜ್ಯೋತ್ಸವದ ದಿನದಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಸಿದ ಟ್ರ್ಯಾಕ್ಟರ್ ಪೆರೇಡ್ ‌ನಲ್ಲಿ ಹಿಂಸಾಚಾರ ನಡೆದಿತ್ತು. ಇದಾದ ಎರಡು ದಿನಗಳಲ್ಲೇ ಅಣ್ಣಾ ಹಜಾರೆ ಮಹತ್ವದ ಘೋಷಣೆ ಮಾಡಿರುವುದು ಹೆಚ್ಚಿನ ಗಮನ ಸೆಳೆದಿದೆ. ಕಳೆದ ತಿಂಗಳಿನಲ್ಲಷ್ಟೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಅಣ್ಣಾ ಹಜಾರೆ ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ತಮ್ಮ ಬೇಡಿಕೆಗಳನ್ನು ಜನವರಿ ಒಳಗಾಗಿ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದರು.ಕಳೆದ ನಾಲ್ಕು ವರ್ಷಗಳಿಂದ ರೈತರ ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿ ಅಂದೋಲನ ನಡೆಸುತ್ತಾ ಬಂದಿದ್ದೇನೆ. ಆದರೆ ರೈತರ ವಿಚಾರದಲ್ಲಿ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ. ಈ ಬಾರಿಯೂ ಕಳೆದ ಮೂರು ತಿಂಗಳಲ್ಲಿ ಐದು ಬಾರಿ ಪ್ರಧಾನಿ ಹಾಗೂ ಕೃಷಿ ಸಚಿವರಿಗೆ ಪತ್ರ ಬರೆದಿದ್ದೇನೆ. ಸರ್ಕಾರದ ಪ್ರತಿನಿಧಿ ಬಂದು ಚರ್ಚೆ ನಡೆಸಿದರೂ ಈ ವರೆಗೆ ಪೂರಕವಾದ ನಿರ್ಣಯ ಕೈಗೊಂಡಿಲ್ಲ. ಹಾಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯಂದು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅಣ್ಣಾ ಹಜಾರೆ ತಿಳಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: