ಮೈಸೂರು

ಕೆ ಎಸ್ ಐ ಸಿ ನಿಗಮದ ಕಾರ್ಖಾನೆಯಲ್ಲಿ ಅವೈಜ್ಞಾನಿಕ ನೇಮಕಾತಿಯನ್ನು ರದ್ದುಗೊಳಿಸಲು ಒತ್ತಾಯ

ಮೈಸೂರು ಜ.29:- ಕೆ ಎಸ್ ಐ ಸಿ ನಿಗಮದ ಕಾರ್ಖಾನೆಯಲ್ಲಿ ಕಾರ್ಮಿಕರ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಅವೈಜ್ಞಾನಿಕ ನೇಮಕಾತಿಯನ್ನು ರದ್ದುಗೊಳಿಸಿ, ನೇಮಕಾತಿ ದಂಧೆಗೆ ಅಧಿಕಾರಿಗಳೊಂದಿಗೆ ಶಾಮಿಲಾಗಿರುವ ಸೈನಿಕ್ ವೆಲ್ ಫೇರ್ ಕೋ ಆಪರೇಟಿವ್ ಸೊಸೈಟಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಆಗ್ರಹಿಸಿದರು.
ತಿ.ನರಸೀಪುರ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಸ್ವಾಮ್ಯದ ರೇಷ್ಮೆ ಕೈಗಾರಿಕೆ ನಿಗಮದ ಮೈಸೂರು ಮತ್ತು ತಿ.ನರಸೀಪುರ ಘಟಕಗಳಿಗೆ ಕೆಲವು ದಿನಗಳ ಹಿಂದೆಯಷ್ಟೇ ಕಾನೂನು ಬಾಹಿರವಾಗಿ ಹೊರಗುತ್ತಿಗೆ ಮೂಲಕ ನಡೆದಿರುವ ನೇಮಕಾತಿ ನವ ಜೀತಗಾರಿಕೆ ಪದ್ಧತಿಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಉದ್ಯೋಗ ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ ಅಸ್ಪಷ್ಟವಾದ ಪ್ರಕಟಣೆಯನ್ನು ಹೊರಡಿಸಿ ಆಕ್ಷೇಪಗಳನ್ನು ಲೆಕ್ಕಿಸದೇ ಗೌಪ್ಯವಾಗಿ ಹೊರಗುತ್ತಿಗೆ ಮೂಲಕ 224 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೆ ಎಸ್ ಐ ಸಿ ಹಾಗೂ ಸೈನಿಕ್ ವೆಲ್ ಫೇರ್ ಕೋ ಆಪರೇಟಿವ್ ಸೋಸೈಟಿ ಪರಸ್ಪರ ಆರೋಪ ಮಾಡಿಕೊಂಡು ನೇಮಕದ ಬಗ್ಗೆ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಯಾವೊಂದು ಮಾಹಿತಿಯನ್ನು ಸ್ಪಷ್ಟವಾಗಿ ನೀಡುತ್ತಿಲ್ಲವೆಂದು ದೂರಿದರು.
ಸರ್ಕಾರಿ ನಿಗಮವೊಂದರ ಕಾರ್ಖಾನೆಯಲ್ಲಿ ಭ್ರಷ್ಟಾಚಾರ ಇಷ್ಟೊಂದು ಪ್ರಮಾಣದಲ್ಲಿ ನಡೆಯುತ್ತಿದ್ದರೂ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತು ಭ್ರಷ್ಟಾಚಾರದಲ್ಲಿ ಪಾಲು ಪಡೆಯುತ್ತಿದೆ. ನಿಗಮದ ಸಚಿವರಿಗೂ ಭ್ರಷ್ಟಾಚಾರದ ಬಗ್ಗೆ ಹಲವು ದೂರುಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ಉದ್ಯೋಗ ಭ್ರಷ್ಟಾಚಾರವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ಕೂಡಲೇ ನೇಮಕಾತಿಯನ್ನು ರದ್ದುಗೊಳಿಸಲು ಆದೇಶಿಸಬೇಕು. ಸೈನಿಕ್ ವೆಲ್ ಫೇರ್ ಸೊಸೈಟಿಯನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಬೇಕು. ತಪ್ಪಿದ್ದಲ್ಲಿ ದಲಿತ ಸಂಘರ್ಷ ಸಮಿತಿ ಹೋರಾಟವನ್ನ ತೀವ್ರಗೊಳಿಸಬೇಕಾಗುತ್ತದೆ ಎಂದು ಆಲಗೂಡು ಶಿವಕುಮಾರ್ ಎಚ್ಚರಿಸಿದರು.
ಅಡುಗೆ ಅನಿಲ ಸೇರಿದಂತೆ ಜನರಿಗೆ ಅತ್ಯಗತ್ಯವಾಗಿ ಬಳಕೆಗೆ ಬೇಕಾಗಿರುವ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರ ಇನ್ನಾದರೂ ದರಗಳನ್ನು ಕಡಿತಗೊಳಿಸಿ ತೈಲ ಹೊರೆಯನ್ನು ಇಳಿಸಬೇಕು. ರೈತರ ಹೋರಾಟವನ್ನು ಪರಿಗನೆಗೆ ತೆಗೆದುಕೊಂಡು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಗ್ರಾ.ಪಂ ಸದಸ್ಯ ವಾಟಾಳು ಬಸವರಾಜು, ಮುಖಂಡರಾದ ಕಿರಗಸೂರು ರಜನಿ, ಬನ್ನಹಳ್ಳಿಹುಂಡಿ ಉಮೇಶ್, ನಾಗರಾಜಮೂರ್ತಿ, ಭೈರಾಪುರ ರಾಜೇಂದ್ರ, ಯಾಚೇನಹಳ್ಳಿ ಮಹದೇವು, ಶಿವರಾಮು, ತೊಟ್ಟವಾಡಿ ರವಿ, ಮಾವಿನಹಳ್ಳಿ ಲಿಂಗರಾಜು, ಕಿರಗಸೂರು ಶಿವು, ನಿಲಸೋಗೆ ಸಿದ್ದರಾಜು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: