ಮೈಸೂರು

ಸಮರ್ಪಣಾ ಟ್ರಸ್ಟ್ ನಿಂದ ವರಕವಿ ದ.ರಾ.ಬೇಂದ್ರೆಗೆ ನಮನ

ಮೈಸೂರು, ಫೆ.1:- ನಗರದ ಸಮರ್ಪಣಾ ಶೈಕ್ಷಣಿಕ ಹಾಗೂ ದಾನದತ್ತಿ ಸಂಸ್ಥೆಯಿಂದ ಭಾನುವಾರ ಜ್ಞಾನಪೀಠ ಪ್ರಶಸ್ತಿ ವಿಜೇತ, ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಸೋದರಿ ಮಹಿಳಾ ಕೇಂದ್ರದ ಆಡಳಿತಾಧಿಕಾರಿ ಪ್ರೊ.ಎಂ.ಎಸ್.ಬಾಲಸುಬ್ರಹ್ಮಣ್ಯಂ ಅವರು ಬೇಂದ್ರೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು, ಬಳಿಕ ಮಾತನಾಡಿದ ಅವರು, ಕನ್ನಡಕ್ಕೆ ಒಬ್ಬನೇ ವರಕವಿ. ಅವರೇ ನಮ್ಮ ನಿಮ್ಮೆಲ್ಲರ ಬೇಂದ್ರೆ. ಬೇಂದ್ರೆ ಕನ್ನಡ ಸಾರಸ್ವತ ಲೋಕಕ್ಕೆ ಕವನಗಳ ಮೂಲಕ ಪ್ರವೇಶಿಸಿ, ಭಾವಗೀತೆಗಳನ್ನಾಡಲು ಮತ್ತಷ್ಟು ಸ್ಪೂರ್ತಿಯನ್ನು ನೀಡಿದ ಬೇಂದ್ರೆ ಅವಿಸ್ಮರಣೀಯರು ಎಂದು ತಿಳಿಸಿದರು. ಕನ್ನಡ ಕಾವ್ಯಲೋಕದ ಗಾರುಡಿಗ ಎಂದು ಪ್ರಸಿದ್ಧಿ ಪಡೆದ ಇವರು ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೈರ್ಯವಂತ ರಸಕವಿ ಬೇಂದ್ರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಮರ್ಪಣಾ ಟ್ರಸ್ಟ್ ನ ಖಜಾಂಚಿ ಹಾಗೂ ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಮಾತನಾಡಿ, ಪ್ರಕೃತಿಯ ಆರಾಧಕರಾದ ಬೇಂದ್ರೆ ತಮ್ಮ ಕವಿತೆಗಳಾದ ‘ಇಳಿದು ಬಾ ತಾಯಿ ಇಳಿದು ಬಾ’, ‘ಮೂಡಲ ಮನೆಯ ಮುತ್ತಿನ ನೀರಿನ’, ‘ಉತ್ತರ ಧೃವದಿಂ ದಕ್ಷಿಣ ಧೃವಕೂ’, ‘ಇನ್ನೂ ಯಾಕ ಬರಲಿಲ್ಲ ಹುಬ್ಬಳ್ಳಿಯವ’, ‘ನೀ ಹಿಂಗ ನೋಡಬ್ಯಾಡ ನನ್ನ’ ಮೂಲಕ ಪ್ರಕೃತಿಯನ್ನು ಆರಾಧಿಸುತ್ತಾ ತಮ್ಮ ಸುತ್ತಮುತ್ತಲಿನ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಯತ್ನವನ್ನು ಕವನಗಳಲ್ಲಿ ಮೂಡಿಸಿದ್ದಾರೆ. ನರಬಲಿ ಎಂಬ ದೇಶಭಕ್ತಿ ಗೀತೆಯ ರಚನೆಯ ಆಧಾರದ ಮೇಲೆ ಬೇಂದ್ರೆಯವರನ್ನು ರಾಜದ್ರೋಹ ಎಸಗಿದ್ದಾರೆಂದು ಬಂಧಿಸಿದಾಗ ಬೆಳಗಾವಿ ಜೈಲಿನಲ್ಲಿ ಜೈಲುವಾಸ ಅನುಭವಿಸಿ ದೇಶಪ್ರೇಮವನ್ನು ಮೆರೆದ ಅಪ್ಟಟ ರಸಕವಿ ಬೇಂದ್ರೆಯವರು ಎಂದು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಸಮಾಜ ಸೇವಕ ಜಿ.ಪಿ.ಹರೀಶ್ ಕನ್ನಡಕ್ಕೆ ಎರಡನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಬೇಂದ್ರೆ ಎಂದೆಂದಿಗೂ ಜನರ ಮನದಾಳದಲ್ಲಿ ಸಾಹಿತ್ಯ ಕೃಷಿಯ ಮೂಲಕ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ತಿಳಿಸಿ, ಇಂದು ಬೇಂದ್ರೆಯವರ ಹುಟ್ಟು ಹಬ್ಬವನ್ನು ನಾಡಿನೆಲ್ಲೆಡೆ ಆಚರಿಸಲಾಗುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿ, ಬೇಂದ್ರೆಯವರ ಹುಟ್ಟು ಹಬ್ಬದ ಮೂಲಕ ಅವರ ಸಾಹಿತ್ಯವನ್ನು ಓದಿ, ಮುಂದಿನ ತಲೆಮಾರು ಓದುವಂತೆ ಪ್ರೇರೇಪಿಸಬೇಕೆಂದರು.
ಕಾರ್ಯಕ್ರಮದಲ್ಲಿ ಗುತ್ತಿಗೆದಾರರಾದ ಎಂ.ಎಸ್.ಮಂಜುನಾಥ್ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಬೇಂದ್ರೆಯವರ ಸುಪ್ರಸಿದ್ಧ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: