ಮೈಸೂರು

ನಿರಂಜನ್ ಕುಮಾರ್ ಗೆ ಮತ ನೀಡಿದ ಜನತೆಯನ್ನು ಅಭಿನಂದಿಸಿದ ಯಡಿಯೂರಪ್ಪ

ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಅವರಿಗೆ ಮತ ಹಾಕಿ ಬೆಂಬಲಿಸಿದ ಮತದಾರರಿಗೆ ಬಿಜೆಪಿ ವತಿಯಿಂದ ಸೋಮವಾರ ಕೃತಜ್ಞತೆ ಸಲ್ಲಿಸಲಾಯಿತು.

ಗುಂಡ್ಲುಪೇಟೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿ ನಿರಂಜನ್ ಕುಮಾರ್ ಸೇರಿದಂತೆ ಪಕ್ಷದ ಹಲವು ಮುಖಂಡರು ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ನವರು ಚುನಾವಣೆಯನ್ನು ಗೆಲ್ಲಲು ಹಣವನ್ನು ಹಂಚಲಿಲ್ಲ ಹಣವನ್ನು ಚೆಲ್ಲಿದ್ದಾರೆ. ಪೊಲೀಸರು ಸೇರಿದಂತೆ ಹಲವಾರು ಅಧಿಕಾರಿಗಳನ್ನು ಬಳಸಿಕೊಂಡು ಹಣವನ್ನು ಚೆಲ್ಲಿದ್ದಾರೆ. ನಿರಂಜನ್ ಕುಮಾರ್ ಗೆಲ್ಲಬಾರದೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟುಗೂಡಿ ಷಡ್ಯಂತ್ರ ಮಾಡಿ ಈ ಚುನಾವಣೆಯನ್ನು ಗೆದ್ದಿದ್ದೀರಿ, ನಿಮಗೆ ಒಳ್ಳೆಯದಾಗಲಿ. ಕಾಂಗ್ರೆಸ್ ಹಾಗೂ ಜೆಡಿಎಸ್ ಅವರು ಯಾಕೆ ಒಟ್ಟಿಗಿದ್ದಾರೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲೊದು ಎಂಬು ನೆನಪಿರಲಿ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್  ಮೇಲೆ ಹರಿ ಹಾಯ್ದರು.  ಬಿಜೆಪಿ ಮೇಲೆ ಭರವಸೆ ಇಟ್ಟು ಮತವಹಾಕಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ಬಾರಿಗಿಂತಲೂ ನಿರಂಜನ್ ಕುಮಾರ್ ಗೆ ಅಧಿಕ ಮತಗಳನ್ನು ನೀಡಿದ್ದೀರಿ. ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾವು ಋಣಿಯಾಗಿರುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು. ಈಗಾಗಲೇ ನಾನು ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದೇನೆ. ಇದೀಗ  ಮೂರ್ನಾಲ್ಕು ದಿನಗಳಲ್ಲಿ ರಾಜ್ಯದ ಬರ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ಆ ಮೂಲಕ ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಚಾರ್ಜ್ ಶೀಟ್ ಬಿಡುಗಡೆ ಮಾಡಿ, ಸಿದ್ದರಾಮಯ್ಯ ದುರಾಡಳಿತವನ್ನು ಹೊರ ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದರು. ಗುಂಡ್ಲುಪೇಟೆ ಉಪಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ನಾನು ಇಂದು ಸೋತಿದ್ದೇನೆ ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿದ್ದೇನೆ. ನಿಮ್ಮ ಈ ಪ್ರೀತಿಯಿಂದ ನನಗೆ ವಿಶ್ವಾಸ ಮೂಡುತ್ತಿದೆ. ನಮ್ಮ ಕುಟುಂಬ ಈ ಕ್ಷೇತ್ರದಲ್ಲಿ ಐದು ಬಾರಿ ಸೋತಿದೆ. ನಾನು ಕೂಡ ಮೂರು ಬಾರು ಸೋತಿದ್ದೇನೆ. ನನ್ನ ಪರ ಯಡಿಯೂರಪ್ಪ ಅವರು ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಮತ ಪ್ರಚಾರ ಮಾಡಿದರು, ಆಗ ಜನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದರು. ಫಲಿತಾಂಶ ಬಂದ ದಿನ ನನಗೆ ದುಃಖವಾಯಿತು, ಕಣ್ಣಲ್ಲಿ ನೀರು ಬರದೇ ಇದ್ದರೂ ಮನಸ್ಸು ಘಾಸಿಗೊಂಡಿತ್ತು. ಆ ವೇಳೆ ನನ್ನ ಮುಖಂಡರು ಹಾಗೂ ಕಾರ್ಯಕರ್ತರು  ನನ್ನನ್ನು ಸಮಾಧಾನಗೊಳಿಸಿದರು.ನಾನು ಈಗ ಸೋತಿದ್ದರೂ ಸಹ ಮುಂದೆ ನಿಮ್ಮೊಟ್ಟಿಗೆ ಇರುತ್ತೇನೆ. ರೈತರ ಪರ ಹೋರಾಟಗಳನ್ನು ಮಾಡುತ್ತೇನೆ ಎಂದು ಜನರಿಗೆ ಭರವಸೆ ನೀಡಿದರು. ಬಿಜೆಪಿ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: