ಮೈಸೂರು

ಹರ್ಷಲ್ ವಿವರಿಸಿದ ಆಡಿಯೋದಲ್ಲೇನಿದೆ ?

ಮೈಸೂರಿನ ಬೆಲವತ್ತ ಗ್ರಾಮದಲ್ಲಿ ಕುದಿಯುತ್ತಿರೋ ಭೂಮಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಬಾಲಕ ಹರ್ಷಲ್ ಮೃತಪಟ್ಟಿರುವುದೇನೋ ನಿಜ. ಆದರೆ ಹರ್ಷಲ್  ಸಾವಿಗೂ ಕೆಲವು ಗಂಟೆಗಳ ಮೊದಲು ಮಾತನಾಡಿದ್ದ ಆಡಿಯೋ  ಲಭ್ಯವಾಗಿದೆ.

ಆಡಿಯೋದಲ್ಲಿ ಅವನ ಮಾತು ಸೆರೆಯಾಗಿದೆ. ಆಣೆಕಟ್ಟಿನ ಬಳಿಯಿರೋ ತೋಟದಲ್ಲಿ ಕ್ರಿಕೆಟ್ ಆಟವಾಡಲೆಂದು 5, 6 ಮಂದಿ ಗೆಳೆಯರು ಸೇರಿ ಹೋಗಿದ್ದೆವು. ಆಟವಾಡುತ್ತಿದ್ದ ವೇಳೆ ಯಶವಂತ್ ಅಣ್ಣ ಬಾಲ್ ಜೋರಾಗಿ ಹೊಡೆದರು. ಬಾಲ್ ತರಲು ಹೋದೆವು. ಈ ವೇಳೆ ಮನೋಜ್ ಬಾಲ್ ತೆಗೆದುಕೊಂಡು ಬರಲು ಹೋಗಿ ಮಣ್ಣಿನಲ್ಲಿ ಸಿಲುಕಿಕೊಂಡು ಕಿರುಚಿದ. ತಕ್ಷಣ ಅವನನ್ನು ಎತ್ತಿಕೊಳ್ಳಲು ನಾನು ಹೋದೆ. ಆದರೆ ಅವನು ನನ್ನ ಕೈಗೆ ಸಿಕ್ಕಿಲ್ಲ. ಇತ್ತ ನಾನು ನಿಂತಲ್ಲಿ ಮಣ್ಣು ಕುಸಿಯುತ್ತಿದ್ದು ಕಾಲು ಬೆಂಕಿಯಲ್ಲಿ ಬೇಯುತ್ತಿತ್ತು. ಈ ವೇಳೆ ಆ ಕಡೆಯಿಂದ ಎದ್ದು ಬಂದು ಮನೋಜ್ ನನ್ನನ್ನು ಹೇಗೋ ಮೇಲಕ್ಕೆತ್ತಿದ. ಎದ್ದ ಬಳಿಕ ರೋಡಿನ ವರೆಗೆ ನಡೆದುಕೊಂಡು ಬಂದು ಅಲ್ಲಿ ಇಬ್ಬರು ಅಣ್ಣಂದಿರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡೆವು. ಹಾಗಾಗಿ ಅವರು ನಮ್ಮನ್ನು ಆಸ್ಪತ್ರೆಗೆ ಸೇರಿಸಿದರು ಅಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಹರ್ಷಲ್ ಘಟನೆಯ ಬಗ್ಗೆ ವಿವರಿಸಿದ್ದಾನೆ ಎನ್ನಲಾಗಿದೆ.

ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ಹರ್ಷಲ್ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಅಣ್ಣ ನನ್ನ ಜೊತೆ ಚೆನ್ನಾಗಿದ್ದ, ಚೆನ್ನಾಗಿ ಮಾತಾನಾಡುತ್ತಿದ್ದ. ಕ್ರಿಕೆಟ್ ಆಡಿಕೊಂಡು ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಅಣ್ಣ ರನ್ನಿಂಗ್ ರೇಸ್‍ನಲ್ಲಿ ಫಸ್ಟ್ ಇದ್ದರು. ಇದೀಗ ಅಣ್ಣ ನಮ್ಮನ್ನ ಬಿಟ್ಟು ಹೋಗಿದ್ದಾರೆ. ಅಣ್ಣ ನನಗೆ ಬೇಕು ಅಂತಾ ಹರ್ಷಲ್ ಸಹೋದರ ಪ್ರಜ್ವಲ್ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ಹರ್ಷಲ್ ಸಾವಿಗೆ ಆ ಘಟನಾ ಸ್ಥಳದಲ್ಲಿ ರಸಾಯನಿಕ ಸೋರಿಕೆಯಾಗುತ್ತಿರುವುದೇ ಕಾರಣವೆಂದು ಹರ್ಷಲ್ ಚಿಕ್ಕಮ್ಮ ಆರೋಪಿಸಿದ್ದಾರೆ. ಅಲ್ಲದೆ ಹರ್ಷಲ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಓದು-ಆಟದಲ್ಲೂ ಮುಂದ್ದಿದ್ದ ಎಂದು ತಮ್ಮ ಅಳಲು ತೋಡಿಕೊಂಡರು. ಮಗನ ಸಾವಿನಿಂದ ನೊಂದ ಹರ್ಷಲ್ ತಾಯಿ ಜಾನ್ಸಿ ಅಸ್ವಸ್ಥಗೊಂಡಿದ್ದು, ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: