ಮೈಸೂರು

ಪೆಟ್ರೋಲ್, ಡೀಸೆಲ್ ದರ ಏರಿಕೆ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಮೈಸೂರು,ಫೆ.4:- ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ನಗರದ ಟೌನ್ ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗೆ ಸೆಸ್ ವಿಧಿಸುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಪ್ರಹಾರ ಮಾಡಲು ಹೊರಟಿದೆ. ಬಡವನ ಬದುಕನ್ನು ಬೀದಿಗೆ ತಂದು ನಿಲ್ಲಿಸಲು ಹೊರಟಿದೆ. ಕೊರೋನಾದಿಂದ ಜನಸಾಮಾನ್ಯರ ಆದಾಯ ಕುಸಿದಿದ್ದು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೆ ದುಡಿಯಲು ಉದ್ಯೋಗವೇ ಇಲ್ಲ. ಕೂಲಿ ಮಾಡಿ ಬದುಕುತ್ತಿದ್ದ ಜನರಿಂದು ಕೂಲಿ ಕೆಲಸ ವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೆಟ್ರೋಲ್ ಡೀಸೆಲ್ ಗ್ಯಾಸ್ ದರ ಏರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಜನರಿಗೆ ಮೋಸ ಮಾಡುತ್ತಿದ್ದಾರೆ. ಈ ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಗ್ಯಾಸ್ ಮೇಲಿನ ಬೆಲೆಯೇರಿಕೆಯನ್ನು ಇಳಿಸಬೇಕು. ದೇಶದ ಜನರು ಇಟ್ಟಿದ್ದ ಅಪಾರ ನಂಬಿಕೆಯನ್ನು ಪ್ರಧಾನಿಗಳು ಹುಸಿಯಾಗಿಸಿದ್ದಾರೆ. ಕಷ್ಟದ ದಿನಗಳನ್ನು ಕಳೆಯುತ್ತಿರುವ ಜನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಮತ್ತಷ್ಟು ಕಂಗಾಲಾಗಿದ್ದಾರೆ. ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ, ಬೇಟಿ ಬಚಾವೋ, ಬೇಟಿ ಪಡಾವೊ, ಸ್ಮಾರ್ಟ್ ಸಿಟಿ ನಿರ್ಮಾಣ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗಳನ್ನು ಅವರೇ ಮರೆತಿದ್ದಾರೆ. ಕೇಂದ್ರ ಸರ್ಕಾರ ದೇಶದ ಜನರನ್ನು ದಿವಾಳಿ ಮಾಡಲು ಹೊರಟಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಜನಸಾಮಾನ್ಯರ ಬದುಕನ್ನು ಬೀದಿ ಪಾಲು ಮಾಡುವ ನಿರ್ಣಯವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ಮುಖಂಡರಾದ ಲೋಕೇಶ್ ಮಾದಾಪುರ, ರವಿ, ಎಂ.ಮಹೇಂದ್ರ ಕಾಗಿನೆಲೆ, ಹರೀಶ್, ದೀಪಕ್, ರೋಹಿತ್, ಸುನಿಲ್ ನಾರಾಯಣ್, ಮೂಗುರು ನಂಜುಂಡಸ್ವಾಮಿ, ಎಂ.ಚಂದ್ರಶೇಖರ್, ಪವನ್, ಸಿದ್ದರಾಮು, ಮಂಜುನಾಥ್, ರವಿನಾಯಕ್, ಶಂಕರ್, ಶರತ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: