ಮೈಸೂರು

72ನೇ ಗಣರಾಜ್ಯೋತ್ಸವದ ಅನುಭವ ಹಂಚಿಕೊಂಡ ಗೊಂಡ ಸಮುದಾಯದ ನಾಗರಾಜ ಗೊಂಡ ಹಾಗೂ ಸೋಲಿಗ ಸಮುದಾಯದ ಮಾದಮ್ಮ

ಮೈಸೂರು,ಫೆ.4:- ಗೊಂಡ ಸಮುದಾಯದ ನಾಗರಾಜ ಗೊಂಡ ಹಾಗೂ ಸೋಲಿಗ ಸಮುದಾಯದ ಮಾದಮ್ಮ ಅವರು ತಮ್ಮ 13 ದಿನಗಳ ಪ್ರವಾಸದ ಅನುಭವವನ್ನು ಹಂಚಿಕೊಂಡರು.
ಗುರುವಾರ ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಅನುಭವ ಹಂಚಿಕೆ ಕಾರ್ಯಕ್ರಮದಲ್ಲಿ ನಾಗರಾಜ ಗೊಂಡ ಮಾತನಾಡಿ, ದೆಹಲಿ ಪ್ರವಾಸ ಸುಖಮಯವಾದ ವಿಶಿಷ್ಟ ಅನುಭವ ನೀಡಿತು. ಪ್ರಧಾನಮಂತ್ರಿ ಸೇರಿದಂತೆ ಅನೇಕ ಗಣ್ಯರನ್ನು ಭೇಟಿಯಾದೆವು. ವಿಐಪಿ ಗ್ಯಾಲರಿಯಲ್ಲಿ ಕುಳಿತು ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಿದೆವು ಎಂದರು.
ಇಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ನಮ್ಮ ಸಮುದಾಯವರಿಗೆ ಪಾಲ್ಗೊಳ್ಳುವುದೇ ಕಷ್ಟವಾಗಿತ್ತು. ನಮ್ಮ ಸಾಂಪ್ರಾದಾಯಿಕ ಧರಿಸಿನಲ್ಲಿ ಹಾಜರಾಗಿದ್ದು ವಿಶೇಷವಾಗಿತ್ತು. 13 ದಿನಗಳ ಕಾಲ ದೆಹಲಿಯ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದು ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.
ನಂತರ ಮಾತನಾಡಿದ ಸೋಲಿಗ ಸಮುದಾಯದ ಮಾದಮ್ಮ , ಇದುವರೆಗೆ ವಿಮಾನದಲ್ಲಿ ಪ್ರಯಾಣವೇ ಮಾಡಿರಲಿಲ್ಲ. ಈ ಕಾರ್ಯಕ್ರಮದ ದೆಸೆಯಿಂದ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡಿದೆ. ದೆಹಲಿ ಬಹಳ ಸ್ವಚ್ಛವಾಗಿದೆ ಹಾಗೆಯೇ ನಮ್ಮ ಕರ್ನಾಟಕವೂ ಸಹ ಸ್ವಚ್ಛವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಬಸವನ ಗೌಡ, ಜಂಟಿ ನಿರ್ದೇಶಕ ರಾಜೇಶ್ ಗೌಡ ಸೇರಿದಂತೆ ಇತರರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: