ಮೈಸೂರು

ರಿಂಗ್ ರಸ್ತೆಯ ಅಕ್ಕ ಪಕ್ಕ ಕಸ ಸುರಿದಲ್ಲಿ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು : ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ


ಮೈಸೂರು,ಫೆ.6:- ಮೈಸೂರು ರಿಂಗ್ ರಸ್ತೆಯ ಅಕ್ಕಪಕ್ಕದಲ್ಲಿ ಹೋಟೆಲ್ , ಮಳಿಗೆಗಳವರು ಕಸವನ್ನು ತಂದು ಸುರಿಯುತ್ತಿದ್ದು, ಅಂತಹವರಿಗೆ ಈಗ ಎಚ್ಚರಿಕೆ ನೀಡಲಾಗುತ್ತಿದೆ. ಮತ್ತೆ ಕಸ ಬಿಸಾಡುವುದು ಪುನರಾವರ್ತನೆಯಾದಲ್ಲಿ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆಯನ್ನು ನೀಡಿದರು.
ಅವರಿಂದು ಸ್ವಚ್ಛ ಸರ್ವೇಕ್ಷಣ ಅಭಿಯಾನದ ಅಂಗವಾಗಿ ಮೈಸೂರಿನ ಹಿನಕಲ್ ಜಂಕ್ಷನ್ ನಿಂದ ಇಲವಾಲದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಜಿ.ಟಿ.ದೇವೇಗೌಡರೊಂದಿಗೆ ಚಾಲನೆ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ನಮ್ಮ ಮೈಸೂರಿನ ನಲ್ವತ್ತ್ಮೂರು ವರೆ ಕಿ.ಮೀ ರಿಂಗ್ ರಸ್ತೆ ಇರಬಹುದು, ಮೈಸೂರು ಹಿನಕಲ್ ಸಿಗ್ನಲ್ ನಿಂದ ಮನುಗನಹಳ್ಳಿವರೆಗಿರುವ ರಾಷ್ಟ್ರೀಯ ಹೆದ್ದಾರಿ ಇರಬಹುದು, ಎರಡು ಭಾಗಗಳಲ್ಲಿ ಕೂಡ ಡೆಬ್ರಿಸ್, ಕಸ, ಕೋಳಿಯ ತ್ಯಾಜ್ಯವೆನಿರಬಹುದು ಸೆಲೂನ್ ಗಳಲ್ಲಿ ಇರುವ ತ್ಯಾಜ್ಯ ಇರಬಹುದು. ಇವುಗಳನ್ನೆಲ್ಲ ತಂದು ಸುರಿದು ಡಂಪ್ ಮಾಡಿ ತಿಪ್ಪೆ ಮಾಡಿ ಇಟ್ಟಿದ್ದಾರೆ. ಕೇಂದ್ರ ಸರ್ಕಾರ ದಿಂದ ಈಗ ನಲ್ವತ್ತ್ಮೂರೂವರೆ ಕಿ.ಮೀ ವರೆಗೆ ರಿಂಗ್ ರಸ್ತೆಗೆ ಡಾಂಬರೀಕರಣ ಮಾಡಲು ಸುಮಾರು 161ಕೋಟಿ ರೂ. ಬಂದಿದೆ. ಮನುಗನಹಳ್ಳಿ ಗೇಟ್ ನಿಂದ ಹಿನಕಲ್ ಸಿಗ್ನಲ್ ವರೆಗೆ ಡಾಂಬರೀಕರಣ ಮಾಡಲು ಸುಮಾರು ಏಳೂವರೆ ಕೋಟಿ ರೂ.ಬಂದಿದೆ. ಡಾಂಬರೀಕರಣ ಮಾಡುವ ಮೊದಲು ಇಡೀ ರಿಂಗ್ ರೋಡ್ ಮತ್ತು ಮನುಗನಹಳ್ಳಿಗೇಟ್ ವರೆಗೆ ಏನು ರಾಷ್ಟ್ರೀಯ ಹೆದ್ದಾರಿಯನ್ನು ಸ್ವಚ್ಛಗೊಳಿಸಲು ನಾನು ಮತ್ತು ಈ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ ಅವರು ಚಾಲನೆ ನೀಡಿದ್ದೇವೆ. ರಿಂಗ್ ರಸ್ತೆ ಈಗಾಗಲೇ ಸ್ವಚ್ಛವಾಗುತ್ತ ಬಂದಿದೆ. ಹಿನಕಲ್ ಸಿಗ್ನಲ್ ನಿಂದ ಮನುಗನಹಳ್ಳಿವರೆಗೆ ಆರ್ ಎಂ ಪಿವರೆಗೂ ಕೂಡ ಸ್ವಚ್ಛಗೊಳಿಸುವ ಕಾರ್ಯಕ್ಕೆ ಶಾಸಕ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆ, ಸ್ಥಳೀಯ ಪಂಚಾಯತ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇತೃತ್ವದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದೇವೆ. ಇನ್ನು ಮೂರು ದಿನಗಳೊಳಗಾಗಿ ಈ ರಸ್ತೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುವುದು ಎಂದರು.
ಇಂದು ಬೆಳಿಗ್ಗೆ ಏರ್ ಪೋರ್ಟ್ ಗೆ ಹೋಗುತ್ತಿದ್ದೆ. ಕೋಟೆ ಮಾನಂದವಾಡಿ ರಸ್ತೆ ಇದೆ. ಅದನ್ನು ಎರಡು ದಿನಗಳ ಹಿಂದೆಯಷ್ಟೇ ಸ್ವಚ್ಛಗೊಳಿಸಿದ್ದೇವೆ. ಪಕ್ಕದಲ್ಲಿರುವ ಹೋಟೆಲ್ ನವರು ಇಂದು ಬೆಳಿಗ್ಗೆ ಮತ್ತೆ ಅಲ್ಲಿ ಕಸ ಸುರಿದ್ದಾರೆ. ಇಂದು ಬೆಳಿಗ್ಗೆ ನಾನು ಅದೇ ಮಾರ್ಗವಾಗಿ ಹೋಗುವಾಗ ಯಾರೋ ಸುರಿಯುತ್ತಿದ್ದರು. ಅವರನ್ನು ಅಲ್ಲೆ ಹಿಡಿದು ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದೇನೆ. ಅವರು ಮತ್ತೆ ವಾಪಸ್ ತೆಗೆದುಕೊಂಡು ಹೋದರು, ನಂಜನಗೂಡು ಜಂಕ್ಷನ್ ಏನಿದೆ ಅಲ್ಲೂ ಕೂಡ ಪಕ್ಕದಲ್ಲೇ ಹೋಟೆಲ್ ಗಳನ್ನಿಟ್ಟು ಕೊಂಡು ಅಲ್ಲೆ ಚಹ ಕುಡಿದು ಕುಡಿದಾದ ನಂತರ ಪೇಪರ್ ಗ್ಲಾಸ್ ಗಳನ್ನು ಅಲ್ಲೇ ಬಿಸಾಡುತ್ತಾರೆ. ನಾವು ಇಷ್ಟೆಲ್ಲ ಸ್ವಚ್ಛಗೊಳಿಸಿದರೂ ಕೂಡ ಮತ್ತೆ ತಂದು ಸುರಿಯುತ್ತಾರೆ. ಈ ರೀತಿ ಮಾಡಿದರೆ ಮೈಸೂರನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಎಂದರಲ್ಲದೆ ಮಾಧ್ಯಮದವರು ಜನರಿಗೆ ಪೌರ ಪ್ರಜ್ಞೆಯನ್ನು ಬೆಳೆಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಜನರು ಇದೇ ರೀತಿ ಯದ್ವಾ ತದ್ವಾ ಕಸ ಸುರಿಯುತ್ತಿದ್ದಲ್ಲಿ ಪ್ರಕರಣ ದಾಖಲಿಸಬೇಕಾಗಿ ಬರಲಿದೆ. ಹಾಗೇ ನಲ್ವತ್ತ್ಮೂರು ವರೆ ಕಿ.ಮೀ. ರಿಂಗ್ ರಸ್ತೆಯ ಅಕ್ಕ ಪಕ್ಕ ದಲ್ಲಿ ಅನಧಿಕೃತವಾಗಿ ಹೋಟೆಲ್ ಗಳನ್ನು ಮಾಡಿಕೊಂಡವರಲ್ಲಿ ಎಚ್ಚರಿಕೆ ನೀಡುತ್ತಿದ್ದೇವೆ, ನೀವು ತೊಟ್ಟಿಯನ್ನು ಇಟ್ಟು ಅದಕ್ಕೆ ವೇಸ್ಟ್ ಹಾಕಿ ಬೇರೆ ಕಡೆ ಡಂಪ್ ಮಾಡದೆ ಅಲ್ಲೆ ಬಿಸಾಡಿದಲ್ಲಿ ನಿರ್ದಾಕ್ಷ್ಯಿಣ್ಯವಾಗಿ ನಿಮ್ಮ ಅಂಗಡಿಗಳನ್ನು ಅಲ್ಲಿಂದ ಎತ್ತಂಗಡಿ ಮಾಡಲಾಗುವುದು. ಹಾಗಾಗಿ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಮೈಸೂರು ಸ್ವಚ್ಛತೆಗೆ ಸಹಕರಿಸಬೇಕು ಎಂದು ತಿಳಿಸಿದರು. ನಾಳೆ ಬೆಳಿಗ್ಗೆ ಉಸ್ತುವಾರಿ ಸಚಿವರ ಜೊತೆ ರಾಷ್ಟ್ರೀಯ ಹೆದ್ದಾರಿ ವೀಕ್ಷಣೆ ನಡೆಸಲಾಗುವುದು. ಅದೇ ವೇಳೆ ರಸ್ತೆಯ ಅಕ್ಕಪಕ್ಕ ಅಂಗಡಿಗಳು ಕಸ ಹಾಕಿದಲ್ಲಿ ಎಚ್ಚರಿಕೆ ನೀಡಿ ಆ ನಂತರ ಅವರ ಮೇಲೆ ನಿರ್ದಾಕ್ಷ್ಯಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಕೃಷಿ ಕಾಯ್ದೆ ವಿರೋಧಿಸಿ ರಸ್ತೆ ತಡೆ ನಡೆಸುವ ರೈತರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ಕೃಷಿಯ ಮೂರು ಕಾಯ್ದೆಗಳಲ್ಲಿ ಏನು ಲೋಪದೇಶಗಳಿದೆ, ಮಾರಕ ಅಂಶವೇನಿದೆ ಎಂಬುದರ ಕುರಿತು ಒಂದೇ ಒಂದು ಅಂಶವನ್ನು ತಿಳಿಸಿ ರಸ್ತೆ ತಡೆ ನಡೆಸಲಿ ಎಂದರು.
ಈ ಸಂದರ್ಭ ಶಾಸಕ ಜಿ.ಟಿ.ದೇವೇಗೌಡ, ಸ್ಥಳೀಯ ಗ್ರಾ.ಪಂ ಸದಸ್ಯರು ಲೋಕೋಪಯೋಗಿ ಅಧಿಕಾರಿಗಳು, ಮನಪಾ ಅಧಿಕಾರಿಗಳು ಮತ್ತಿತರರಿದ್ದರು.
ಹಿನಕಲ್ ಇಲ್ಲಿಂದ ಹಿಡಿದು ಆರ್ ಎಂ ಪಿ ವರೆಗೆ 11 ಕಿ.ಮೀ ಬರತ್ತೆ, 12ಜೆಸಿಬಿ, 5ಡೋಜರ್, ಟಿಪ್ಪರ್ ಗಳು, 5-6 ಟ್ರ್ಯಾಕ್ಟರ್ , ನೂರು ಕಾರ್ಮಿಕರನ್ನು ಬಳಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: