ಮೈಸೂರು

ನಾಯಿಕೊಡೆಗಳಂತೆ ಅನಧಿಕೃತವಾಗಿ ತಲೆ ಎತ್ತುತ್ತಿವೆ ಪಿಜಿಗಳು; ಇಲ್ಲ ಭದ್ರತೆ : ಕೈಕಟ್ಟಿ ಕುಳಿತಿದೆ ಮಹಾನಗರಪಾಲಿಕೆ

ರಾಜ್ಯದ ಮೂಲೆ ಮೂಲೆಗಳಿಂದ ಜನತೆ ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಬೃಹತ್ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಅಂಥಹ ದೊಡ್ಡ ನಗರಗಳಲ್ಲಿ ಬಾಡಿಗೆ ಕಟ್ಟುವುದು ಅಂದರೆ ಸಾಧ್ಯವಾಗದ ಮಾತು ಎನ್ನುವ ಕಾರಣಕ್ಕಾಗಿ ಪೇಯಿಂಗ್ ಗೆಸ್ಟ್ ಆಗಿರಲು ಬಯಸುತ್ತಾರೆ. ಇದೀಗ ಪೇಯಿಂಗ್ ಗೆಸ್ಟ್ ಅಂದರೆ ಪಿಜಿಗಳು ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ತಲೆಎತ್ತುತ್ತಿದ್ದು, ಕಲುಷಿತ ವಾತಾವರಣವನ್ನು ಸೃಷ್ಟಿಸುತ್ತಿದೆ.

ಒಂದು ಮನೆಯನ್ನು ಬಾಡಿಗೆಯ ಹೆಸರಿನಲ್ಲಿ ಪಡೆದು ತಾನು ಕ್ಯಾಟರಿಂಗ್ ನಡೆಸುತ್ತೇನೆ ಅಥವಾ ಬ್ಯುಸಿನೆಸ್ ಮಾಡುತ್ತೇನೆ ಅಂತಲೋ ಹೇಳಿ ಏನೋ ಕಾಗದಪತ್ರವನ್ನು ಕಾಟಾಚಾರಕ್ಕೆ ತೋರಿಸಿ 40ರಿಂದ 50, 100ರಿಂದ 150 ಜನರನ್ನು ಇರಿಸಿಕೊಂಡು ಪೇಯಿಂಗ್ ಗೇಸ್ಟ್ ನಡೆಸುತ್ತಾರೆ. ಆದರೆ ಅವರು ನಗರಪಾಲಿಕೆಗೆ ತೆರಿಗೆಯ ರೂಪದಲ್ಲಿ ಒಂದೂವರೆಯಿಂದ ಎರಡು ಸಾವಿರದವರೆಗೆ ಹಣ ನೀಡುತ್ತಾರೆ. ಆದರೆ ತಾವು ತಿಂಗಳಿಗೆ ಒಬ್ಬೊಬ್ಬರಿಗೆ ನಾಲ್ಕು ಸಾವಿರವೆಂದರೂ ಬರೋಬ್ಬರಿ ಎರಡರಿಂದ ಮೂರು ಲಕ್ಷ ರೂಪಾಯಿ ಸಂಗ್ರಹಿಸುತ್ತಾರೆ. ಸುಲಭವಾಗಿ ಹಣ ಸಂಪಾದಿಸುವ ಮಾರ್ಗವಿದಾಗಿದ್ದು, ಎಲ್ಲರೂ ಇವುಗಳನ್ನೇ ಉದ್ಯಮವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಎಲ್ಲ ಪಿಜಿಗಳು ಸುರಕ್ಷಿತವಲ್ಲ. ಇಲ್ಲಿ ಯಾವುದೇ ನಿಯಮಗಳಿಲ್ಲ. ಎಷ್ಟೊತ್ತಿಗೆ ಬೇಕಾದರೂ ಬರಬಹುದು. ಎಷ್ಟೊತ್ತಿಗೆ ಬೇಕಾದರೂ ಹೋಗಬಹುದು. ಎಲ್ಲಿಯವನು, ಯಾರು, ಏನು, ಉದ್ಯೋಗ ಮಾಡುತ್ತಿದ್ದಾನಾ ಅಥವಾ ವಿದ್ಯಾರ್ಥಿಯಾ ಊಹೂಂ ಇದ್ಯಾವುದೂ ತಿಳಿದಿರುವುದಿಲ್ಲ. ಇನ್ನು ಮತ್ತೆ ಜೂನ್ ನಲ್ಲಿ ಕಾಲೇಜುಗಳು ಆರಂಭವಾಗಲಿದ್ದು ಪಿಜಿ ಸೇರುವವರ ಸಂಖ್ಯೆಯೂ ಅಧಿಕವಾಗಲಿದೆ.

ಮೈಸೂರಿನ ಸರಸ್ವತಿಪುರಂ, ಲಕ್ಷ್ಮಿಪುರಂ, ಗೋಕುಲಂ, ಕುವೆಂಪುನಗರ, ಬೋಗಾದಿ, ವಿವೇಕಾನಂದನಗರ ಹೀಗೆ ಪ್ರಮುಖ ಕಡೆಗಳಲ್ಲಿ ಪಿಜಿ ದಂದೆ ಅವ್ಯಾಹತವಾಗಿ ನಡೆದಿದೆ. ಅದರಲ್ಲೂ ಹೆಣ್ಣುಮಕ್ಕಳಿರುವ ತಂದೆತಾಯಿಗಳು ತಮ್ಮ ಮಕ್ಕಳನ್ನು ಎಷ್ಟು ಜೋಪಾನವಾಗಿ ನೋಡಿಕೊಂಡರೂ ಸಾಲದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಿಟಿಟುಡೆಯೊಂದಿಗೆ ಕುವೆಂಪುನಗರದ ಕಾಮಾಕ್ಷಿ ಆಸ್ಪತ್ರೆ ರಸ್ತೆಯ ನಿವಾಸಿ ಭಾಗ್ಯ ಮಾತನಾಡಿ ರೆಸಿಡೆನ್ಶಿಯಲ್ ಏರಿಯಾಗಳಲ್ಲಿ ಈ ಪಿಜಿ ನಡೆಸಲಾಗುತ್ತಿದೆ. ಇಲ್ಲಿರೋದು ಬರೀ ಹುಡುಗರೇ, ಅವರಲ್ಲಿ ಯಾವುದೇ ಸಂಸ್ಕೃತಿಯೂ ಕಾಣಿಸುತ್ತಿಲ್ಲ. ನಾವು ಕುಟುಂಬಸ್ಥರು. ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೆ. ಬೇಸರ ಬಂದಾಗ ಹೊರಗೆ ಪಾರ್ಕ್ ಗೆ ಬರೋ ಹಾಗೂ ಇಲ್ಲ. ಅಸಭ್ಯವಾಗಿ ವರ್ತಿಸುತ್ತಾರೆ. ಈ ಕುರಿತು ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕ ಸಭೆ ನಡೆಸಿದಾಗ ಹೇಳಿದ್ದೇವೆ. ಆದರೆ ಅವರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನೀವು ನಗರಪಾಲಿಕೆಯವರಿಗೆ ತಿಳಿಸಿ ಎನ್ನತ್ತಾರೆ. ನಗರಪಾಲಿಕೆಯವರು ಏನೂ ಕ್ರಮ ಕೈಗೊಂಡಂತೆ ಕಾಣಿಸುತ್ತಿಲ್ಲ. ಹೀಗಾದರೆ ನಾವು ಇಲ್ಲಿ ಹೇಗೆ ಇರುವುದು ಎಂದು ತಮ್ಮ ಅಳಲು ತೋಡಿಕೊಂಡರು.

ಸಿಟಿಟುಡೆಯೊಂದಿಗೆ ಮೈಸೂರು ವಲಯ ಮೂರರ ಆಯುಕ್ತೆ ರೂಪಾ ಮಾತನಾಡಿ ಮೈಸೂರಲ್ಲಿ ಪೇಯಿಂಗ್ ಗೆಸ್ಟ್ ತುಂಬಾ ಇದೆ. ಬೇರೆ, ಬೇರೆ ವ್ಯವಹಾರಗಳನ್ನು ಮಾಡುತ್ತೇವೆ ಎಂದು ಪೇಯಿಂಗ್ ಗೆಸ್ಟ್ ಗಳನ್ನು ನಡೆಸಲಾಗುತ್ತಿದೆ. ನಾನೂ ಕೂಡಾ ಕೆಲವು ಕಡೆ ಭೇಟಿ ನೀಡಿದ್ದೇನೆ. ನಮ್ಮ ವಲಯದಲ್ಲಂತೂ ತುಂಬಾನೇ ಇದೆ. ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ನಾನು  ವೀಕ್ಷಣೆ ಮಾಡಿದ ಪಿಜಿಗಳ ಅವ್ಯವಸ್ಥೆ, ಅನುಮತಿ ಇಲ್ಲದೇ ಮಾಡುತ್ತಿರುವುದರ ಕುರಿತಂತೆ ಸಂಪೂರ್ಣ ವರದಿಯನ್ನು ಮಹಾನಗರಪಾಲಿಕೆಯ ಆಯುಕ್ತರಿಗೆ ನೀಡಿದ್ದೇನೆ. ಅವರೇನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದರು. ಅನಧಿಕೃತವಾಗಿ ಪಿಜಿಗಳನ್ನು ನಡೆಸುತ್ತಿರುವುದರಿಂದ ಪಾಲಿಕೆಗೆ ಆದಾಯ ಬರುತ್ತಿಲ್ಲ ಎಂದು ತಿಳಿಸಿದರು.

ಪೇಯಿಂಗ್ ಗೆಸ್ಟ್ ಕೇಂದ್ರಗಳನ್ನು ನಡೆಸುವವರು ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯಬೇಕು ಎಂಬ ನಿಯಮವಿದ್ದರೂ ಅವುಗಳನ್ನು ಪಾಲಿಸಲಾಗುತ್ತಿಲ್ಲ. ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅನಧಿಕೃತ ಪಿಜಿಗಳಿಂದ ನಿವಾಸಿಗಳಿಗೆ ಭದ್ರತೆ ಸಿಗಲಾರದು. ಸ್ಥಳೀಯ ಸಂಸ್ಥೆಗಳ ವರಮಾನಕ್ಕೆ ಕತ್ತರಿ ಬೀಳಲಿದೆ ಎನ್ನುವುದು ಗೊತ್ತಿದ್ದರೂ ಏನೂ ಕ್ರಮ ಕೈಗೊಳ್ಳದೇ ಪಾಲಿಕೆ ಕೈಕಟ್ಟಿ ಕುಳಿತಿರುವುದು ಆಶ್ಚರ್ಯವೇ ಸರಿ.  ದಿಲ್ಲಿ, ಮುಂಬೈ ನಗರಗಳಲ್ಲಿಯೂ ಸಾಕಷ್ಟು  ಪಿಜಿಗಳಿವೆ. ಅಲ್ಲಿ ಸಾಕಷ್ಟು ಭದ್ರತಾಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಪಿಜಿಯಲ್ಲಿ ವಾಸಿಸುವವರ  ಸಂಪೂರ್ಣಮಾಹಿತಿಯನ್ನು ಪೋಟೋ ಸಮೇತ ಸಂಗ್ರಹಿಸಿಕೊಳ್ಳಲಾಗುತ್ತದೆ. ಅಪರಿಚಿತರು ಹೊರಗಿನವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇಲ್ಲೂ ಕೂಡ ಅದೇ ಮಾದರಿಯಲ್ಲಿ  ಸಿಸಿಟಿವಿಗಳನ್ನು ಅಳವಡಿಸಿ, ಮಾಹಿತಿಗಳನ್ನು ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ಪಾಲಿಕೆಯ ಅನುಮತಿ ಪಡೆದೇ ಪಿಜಿಗಳನ್ನು ನಡೆಸಿದಲ್ಲಿ ಉಳಿದುಕೊಳ್ಳುವವರಿಗೂ, ಉಳಿಸಿಕೊಂಡವರಿಗೂ ಸುರಕ್ಷಿತವಾಗಲಿದೆ.  ಅಷ್ಟೇ ಅಲ್ಲದೇ ಅಕ್ಕಪಕ್ಕದಲ್ಲಿ ವಾಸಿಸುವವರೂ ಮುಜುಗರಪಡಬೇಕಾದ ಅಗತ್ಯವಿರುವುದಿಲ್ಲ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: