ಪ್ರಮುಖ ಸುದ್ದಿವಿದೇಶ

ಪ್ರಯೋಗಾಲಯದಿಂದ ಕೊರೊನಾ ಸೋಂಕು ಸೋರಿಕೆಯಾಗಿಲ್ಲ: ಡಬ್ಲ್ಯೂಹೆಚ್‌ಒ

ವುಹಾನ್,ಫೆ.10-ಇಡೀ ವಿಶ್ವವನ್ನೇ ತತ್ತರಿಸುವಂತೆ ಮಾಡಿದ ಕೊರೊನಾ ವೈರಸ್ ಅನ್ನು ಚೀನಾ ಉದ್ದೇಶ ಪೂರ್ವಕವಾಗಿ ಹರಿಯಬಿಟ್ಟಿದೆ ಎಂಬ ಆರೋಪವನ್ನು ವಿಶ್ವ ಆರೋಗ್ಯ ಸಂಸ್ಥೆ ಅಲ್ಲಗೆಳೆದಿದೆ.

ಕೊರೊನಾ ವೈರಸ್ ಚೀನಾದ ವುಹಾನ್ ನಲ್ಲಿರುವ ಕುಖ್ಯಾತ ದ ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಸೋರಿಕೆಯಾಗಿರುವ ಸಾಧ್ಯತೆ ಇಲ್ಲ. ಅದು ಪ್ರಾಣಿಗಳಿಂದ ಮಾನವರಿಗೆ ಹರಡಿರುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ.

2019ರ ಡಿಸೆಂಬರ್ ಗೂ ಮುನ್ನ ಚೀನಾದಲ್ಲಿ ಕೊರೊನಾ ವೈರಸ್ ಇತ್ತೇ ಎಂಬುದನ್ನು ಹುಡುಕುವ ನಿಟ್ಟಿನಲ್ಲಿ 10 ರಾಷ್ಟ್ರಗಳ ಪ್ರತಿನಿಧಿಗಳನ್ನು ಡಬ್ಲ್ಯೂಹೆಚ್‌ಒ ನಿಯೋಗವೊಂದು ಚೀನಾಕ್ಕೆ ಭೇಟಿ ಕೊಟ್ಟಿದೆ. ಈ ವೇಳೆ ಅದು ವುಹಾನ್ ಹೊರವಲಯದಲ್ಲಿರುವ ಕಾಡುಪ್ರಾಣಿಗಳ ಮಾಂಸದ ಮಾರುಕಟ್ಟೆ ಮತ್ತು ನಾನಾ ರೀತಿಯ ವೈರಾಣುಗಳ ಸಂಗ್ರಹ ಹೊಂದಿರುವ ದ ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ.

ಪರಿಶೀಲನೆ ಬಳಿಕ ಪ್ರತಿಕ್ರಿಯೆ ನೀಡಿರುವ ಡಬ್ಲ್ಯೂಹೆಚ್‌ಒದ ತಜ್ಞ ಪೀಟರ್ ಬೆನ್ ಎಂಬರೇಕ್ ಪ್ರಾಥಮಿಕ ತನಿಖೆ ಅನ್ವಯ, 2019ರ ಡಿಸೆಂಬರ್ ಗೂ ಮೊದಲೇ ಚೀನಾದಲ್ಲಿ ಸಾರ್ಸ್ ಕೋವ್ 2 ವೈರಸ್ ಇತ್ತು ಎನ್ನಲು ಸಾಕ್ಷ್ಯಾಧಾರಗಳಿಲ್ಲ. ವೈರಲ್ ಬಾವಲಿಯಲ್ಲಿ ಉಗಮವಾಗಿ ಬಳಿಕ ಮಾನವರಿಗೆ ಹರಡಿರುವ ಸಾಧ್ಯತೆಗಳಿವೆ. ಆದರೆ, ವುಹಾನ್ ನಲ್ಲಿ ಬಾವಲಿಗಳು ಇಲ್ಲದ ಕಾರಣ, ಅದು ಬಾವಲಿಗಳಿಂದ ಯಾವುದಾದರೂ ಸಸ್ತನಿಗೆ ಹರಡಿ ಅಲ್ಲಿಂದ ಮಾನವರಿಗೆ ವರ್ಗಾವಣೆಯಾಗಿರುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.

ವೈರಸ್ ಗಳು ಪ್ರಯೋಗಾಲಯದಿಂದ ಸೋರಿಕೆಯಾಗಿರುವುದು ಎಂಬ ಕಲ್ಪನೆಗಳು ಬಹುತೇಕ ತಪ್ಪು ಎಂದು ನಮ್ಮ ಅಧ್ಯಯನದಿಂದ ತಿಳಿದುಬಂದಿದೆ. ಶೀತಲೀಕರಿಸಿದ ಉತ್ಪನ್ನಗಳ ಮೂಲಕವೂ ವೈರಸ್ ಹರಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: