ಕರ್ನಾಟಕದೇಶಮೈಸೂರು

ಅಕ್ಟೋಬರ್ 4 ರ ಒಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಸರ್ವೊಚ್ಚ ನ್ಯಾಯಾಲಯ ಆದೇಶ: ಕೇಂದ್ರ ಸರ್ಕಾರದ ಒಪ್ಪಿಗೆ

ನವದೆಹಲಿ: ಕಾವೇರಿ ನೀರು ಹಂಚಿಕೆ ಕುರಿತು ಸೆ.30 ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‍, ಅಕ್ಟೋಬರ್ 4 ರ ಒಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಜೊತೆಗೆ ಶನಿವಾರದಿಂದ ದಿನನಿತ್ಯ 6 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಕಟ್ಟಾಜ್ಞೆ ವಿಧಿಸಿದೆ. ಈ ಮೂಲಕ ಕರ್ನಾಟಕ ತನ್ನ ಜಲಾಶಯಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳಲಿದ್ದು, ಕೇಂದ್ರ ಸರ್ಕಾರವೇ ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರಿನ ನಿರ್ವಹಣೆ ಮಾಡಲಿದೆ.

ವಿಚಾರಣೆ ಆರಂಭವಾದಾಗಿನಿಂದ ಕರ್ನಾಟಕದ ವಾದಕ್ಕೆ ಮನ್ನಣೆ ನೀಡದ ಸರ್ವೋಚ್ಚ ನ್ಯಾಯಾಲಯ, ಅ. 4 ರ ಒಳಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಅಟಾರ್ನಿ ಜನರಲ್ ಅವರಿಗೆ ಸೂಚಿಸಿತು. ತತ್‍ಕ್ಷಣ ಸ್ಪಂದಿಸಿದ ಕೇಂದ್ರ ಸರ್ಕಾರ, ನಿರ್ವಹಣಾ ಮಂಡಳಿ ರಚನೆಗೆ ಒಪ್ಪಿಗೆ ಸೂಚಿಸಿತು. ಕುಡಿಯುವ ನೀರಿನ ಪೂರೈಕೆಗೂ ನೀರು ಲಭ್ಯವಿಲ್ಯವೆಂಬ ಕರ್ನಾಟಕದ ವಾದಕ್ಕೆ ಎಳ್ಳಷ್ಟೂ ಮನ್ನಣೆ ನೀಡದ ಸುಪ್ರೀಂಕೋರ್ಟ್‍, ಕರ್ನಾಟಕಕ್ಕೆ ಮಾರಕವಾಗಬಹುದಾದ ಆದೇಶ ವಿಧಿಸಿ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿತು.

ಗಾಯದ ಮೇಲೆ ಬರೆ: “ಈಗಾಗಲೇ ನೀರು ತಡೆಹಿಡಿಯುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದೀರಿ. ಈಗ ನೀರು ಬಿಡುಗಡೆ ಮಾಡದಿದ್ದರೆ ನ್ಯಾಯಾಂಗ ನಿಂದನೆಯ ಕಠಿಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಕರ್ನಾಟಕ ಸರ್ಕಾರಕ್ಕೆ ನ್ಯಾಯಾಲಯ ಎಚ್ಚರಿಕೆ ನೀಡಿತು. ಇದರಿಂದ ಕರ್ನಾಟಕಕ್ಕೆ ಗಾಯದ ಮೇಲೆ ಬರೆ ಎಳೆದ ಅನುಭವವಾಯಿತು.

ರಂಗೋಲಿ ಕೆಳಗೆ ನುಸುಳಿದ ನ್ಯಾಯಾಲಯ: ಕರ್ನಾಟಕ ಸರ್ಕಾರವು ವಿಧಾನಮಂಡಲದ ನಿರ್ಣಯವನ್ನು ಮುಂದುಮಾಡಿ ನೀರು ಬಿಡುಗಡೆ ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್‍ ಆದೇಶವನ್ನು ಜಾರಿ ಮಾಡಿಲ್ಲವಾದ ಕಾರಣ ಮುಖ್ಯಮಂತ್ರಿ ಮತ್ತು ಮುಖ್ಯಕಾರ್ಯದರ್ಶಿಗಳನ್ನು ಶಿಕ್ಷೆಗೆ ಗುರಿಮಾಡಬಹುದು ಎಂಬ ಆತಂಕವನ್ನು ಹುಸಿ ಮಾಡಿದ ನ್ಯಾಯಲಯವು, ತಕ್ಷಣ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡುವ ಮೂಲಕ ಕರ್ನಾಟಕ ವಿಧಾನಮಂಡಲದ ನಿರ್ಣಯವನ್ನು ನಾಜೂಕಾಗಿ ಬದಿಗೆ ಸರಿಸಿತು. ಇದರಿಂದಾಗಿ ಮುಖ್ಯಮಂತ್ರಿಗಳು ಹಾಗೂ ಮುಖ್ಯಕಾರ್ಯದರ್ಶಿಯವರು ನ್ಯಾಯಂಗ ನಿಂದನೆಯ ತೂಗುಗತ್ತಿಯಿಂದ ಪಾರಾದಂತಾದರೂ ರಾಜ್ಯದ ಹಿತಾಸಕ್ತಿ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ರಚನೆಯಿಂದಾಗಿ ಪ್ರಕರಣದಲ್ಲಿ ತಮಿಳುನಾಡು ಸಂಪೂರ್ಣ ಮೇಲುಗೈ ಸಾಧಿಸಿತು.

ನಿರ್ವಹಣಾ ಮಂಡಳಿ ಅಂಗರಚನೆ: ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಕಾವೇರಿ ನಿರ್ವಹಣಾ ಮಂಡಳಿಗೆ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನಿಯರ್‍ ಅಧ್ಯಕ್ಷರಾಗಿರುತ್ತಾರೆ. ಕಾವೇರಿ ನದಿಪಾತ್ರದ ನಾಲ್ಕು ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಪುದುಚೆರಿ ರಾಜ್ಯಗಳ ಮುಖ್ಯ ಇಂಜಿನಿಯರ್‍ಗಳು, ಕೃಷಿ ಇಲಾಖೆ, ಹವಾಮಾನ ಇಲಾಖೆ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಈ ಎಲ್ಲ ಸದಸ್ಯರ ಅಭಿಪ್ರಾಯ ಆಲಿಸಿ ತಟಸ್ಥ ಅಧಿಕಾರಿಗಳು ನೀರು ಬಿಡುಗಡೆಯ ನಿರ್ಧಾರ ಮಾಡಲಿದ್ದಾರೆ.

ಕಾವೇರಿ ನದಿಪಾತ್ರದ ಕಬಿನಿ, ಕೆಆರ್‍ಎಸ್‍, ಹೇಮಾವತಿ, ಹಾರಂಗಿ ಜಲಾಶಯಗಳನ್ನು ಕಾವೇರಿ ನಿರ್ವಹಣಾ ಮಂಡಳಿಯು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದ್ದು, ಕರ್ನಾಟಕವು ನಿರ್ವಹಣಾ ಮಂಡಳಿಯ ಪ್ರತಿ ಸಭೆಯಲ್ಲಿ ತನ್ನ ಪಾಲಿನ ನೀರಿಗಾಗಿ ವಾದ ಮಂಡಿಸಬೇಕಾಗಿದೆ. ಕರ್ನಾಟಕದ ವಿರುದ್ಧ ಉಳಿದ ಮೂರು ರಾಜ್ಯಗಳ ಪ್ರತಿನಿಧಿಗಳು ಒಂದಾದರೆ ಪ್ರತಿ ಹಂತದಲ್ಲೂ ಕರ್ನಾಟಕ ಅನ್ಯಾಯಕ್ಕೀಡಾಗುವ ಸಾಧ್ಯತೆ ಇದೆ.

Leave a Reply

comments

Related Articles

error: