ಮೈಸೂರು

ಎಟಿ&ಎಸ್ ಕಾರ್ಖಾನೆಯಲ್ಲಿ ಕೆಲಸದಿಂದ ವಜಾಗೊಳಿಸಿರುವ ಕಾರ್ಮಿಕರ ಮರು ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಫೆ.11:- ಎಟಿ&ಎಸ್ ಕಾರ್ಖಾನೆಯಲ್ಲಿ  ಕೆಲಸದಿಂದ ವಜಾಗೊಳಿಸಿರುವ ಕಾರ್ಮಿಕರ ಮರು ನೇಮಕಕ್ಕೆ ಒತ್ತಾಯಿಸಿ ಪ್ರತಿಭಟನೆ ಎಟಿ&ಎಸ್ ಇಂಡಿಯಾ ಪ್ರೈ.ಲಿ.ಎಂಪ್ಲಾಯೀಸ್ ಅಸೋಸಿಯೇಶನ್ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರು  ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಎಟಿ&ಎಸ್ ಕಾರ್ಖಾನೆಯ ಆಡಳಿತ ವರ್ಗ ಕಾನೂನು ಬಾಹಿರವಾಗಿ ಕಳೆದ 12ವರ್ಷಗಳಿಂದ ನಿರಂತರವಾಗಿ ನೇರ ಉತ್ಪಾದನೆಯಲ್ಲಿ ತೊಡಗಿ ಕೆಲಸ ಮಾಡಿಕೊಂಡು ಬರುತ್ತಿದ್ದು ಸುಮಾರು 71ಜನ ಕಾರ್ಮಿಕರನ್ನು ವಿನಾಕಾರಣ ಇಲ್ಲ ಸಲ್ಲದ ಆಪಾದನೆ ಮಾಡಿ ಕೋವಿಡ್ ಸಂದರ್ಭದಲ್ಲಿ ರಜೆ ಕೇಳಿದ ಕಾರಣ ನೀಡಿ ಕೆಲಸದಿಂದ ವಜಾ ಗೊಳಿಸಿರುವುದರಿಂದ ಕೆಲಸಕ್ಕೆ ಮರು ನೇಮಕ ಮಾಡುವ ವಿಚಾರವಾಗಿ ನ್ಯಾಯ ಒದಗಿಸುವಂತೆ ಕೋರಿ ಎಟಿ&ಎಸ್ ಇಂಡಿಯಾ ಪ್ರೈ.ಲಿ.ಎಂಪ್ಲಾಯೀಸ್ ಅಸೋಸಿಯೇಶನ್   ಪ್ರತಿಭಟನೆ ನಡೆಸಿತು.

ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ಕಳೆದ 30ವರ್ಷಗಳಿಂದಲೂ ಅದಕ್ಕಿಂತ ಹೆಚ್ಚು ವರ್ಷಗಳಿಂದ ನಿರಂತರವಾಗಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ತಯಾರಿಕೆಯಲ್ಲಿ ತೊಡಗಿ ದೇಶ ವಿದೇಶಗಳಿಗೆ ಮಾರಾಟ ಮಾಡುವುದರ ಮೂಲಕ ವಾರ್ಷಿಕ ನೂರಾರು ಕೋಟಿ ವಹಿವಾಟು ನಡೆಸಿ ಕೋಟಿಗಟ್ಟಲೆ ಲಾಭಗೊಳಿಸಲಾಗುತ್ತಿದೆ. ಕಾರ್ಖಾನೆಯಲ್ಲಿ ಸುಮಾರು 800ಕ್ಕೂ ಹೆಚ್ಚು ಕಾರ್ಮಿಕರು ವಿವಿಧ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದು ಇದರಲ್ಲಿ ಸುಮಾರು 100ಕ್ಕೂ ಹೆಚ್ಚು ಜನರನ್ನು ಟೆಕ್ನಿಕಲ್ ಟ್ರೈನಿ ಹೆಸರಿನಲ್ಲಿ ಕಳೆದ 2008ರಲ್ಲಿ ನೇಮಕ ಮಾಡಿ 2ವರ್ಷಗಳ ನಂತರ ಖಾಯಂಗೊಳಿಸಬೇಕಾಗಿದ್ದು ಕಳೆದ 12ವರ್ಷಗಳಿಂದಲೂ ಖಾಯಂಗೊಳಿಸದೆ ಕಡಿಮೆ ವೇತನದಲ್ಲಿ ದುಡಿಸುತ್ತಿದ್ದು ಖಾಯಂ ಕಾರ್ಮಿಕರಿಗೆ  ನೀಡದ ಯಾವುದೇ ಸೌಲಭ್ಯಗಳನ್ನು ನೀಡದೆ ಕಾನೂನು ಬದ್ಧ ಸೌಲಭ್ಯಗಳನ್ನು ನೀಡದೆ ವಂಚಿಸಿದ್ದರಿಂದ ಕಾರ್ಮಿಕರು ಸಂಘದ ಮೂಲಕ ಔದ್ಯಮಿಕ ನ್ಯಾಯಾಧಿಕರಣದ ಮುಂದೆ ವಿವಾದ ಎತ್ತಿದ್ದರಿಂದ ಕುಪಿತಗೊಂಡ ಆಡಳಿತವರ್ಗ  ನಂಜನಗೂಡಿನಲ್ಲಿ ಕೋವಿಡ್ ಹೆಚ್ಚಳದಿಂದ ರೆಡ್ ಝೋನ್ ಇದ್ದರೂ ಸಹ ಕೆಲಸಕ್ಕೆ ಬರಬೇಕೆಂದು ಒತ್ತಾಯಿಸಿ, ಕೆಲಸಕ್ಕೆ ಬರದಿದ್ದರೆ ಕೆಲಸ ನಿರಾಕರಿಸುವ ಬೆದರಿಕೆ ಹಾಕಿದ್ದರಿಂದ ಏಪ್ರೀಲ್ 2020 ರಲ್ಲಿ ರೆಡ್ ಝೋನ್ ಮಾಡಿರುವುದರಿಂದ ಪೊಲೀಸ್ ನವರು ಓಡಾಡಲು ಬಿಡದೆ ಕರ್ಫ್ಯೂ ಜಾರಿ ಮಾಡಿದ್ದರಿಂದ ಕೆಲಸಕ್ಕೆ ರಜೆ ನೀಡಲು ಕೋರಿದ್ದರಿಂದ ಆಡಳಿತ ವರ್ಗ ರಜೆ ಕೋರಿದ್ದೇ ನೆಪ ಮಾಡಿ ಇಲ್ಲಸಲ್ಲದ ಆಪಾದನೆ ಮಾಡಿ ಸುಮಾರು 71ಮಂದಿ ಕಾರ್ಮಿಕರನ್ನು ಕೆಲಸದಿಂದ ಅಮಾನತುಗೊಳಿಸಿ ನಂತರ ಕೆಲಸದಿಂದ ವಜಾಗೊಳಿಸಿದ್ದಾರೆ. ಹೊಸದಾಗಿ ಕಾರ್ಮಿಕರನ್ನು ನೇಮಿಸಿ 71ಮಂದಿ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ. ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ.

ಕೆಲಸವನ್ನು ಕಳೆದುಕೊಂಡಿರುವ ಕಾರ್ಮಿಕರು ಜೀವನ ನಡೆಸಲು ಪರದಾಡುವಂತಾಗಿದೆ. ಇದರಿಂದ ತಂದೆತಾಯಿಯವರ ಆರೋಗ್ಯ ರಕ್ಷಣೆ, ಮಕ್ಕಳ ವಿದ್ಯಾಭ್ಯಾಸದ ಶುಲ್ಕ, ಕುಟುಂಬ ನಿರ್ವಹಣೆ ಮಾಡಲಾಗದೆ ಪರದಾಡುವಂತಾಗಿದೆ.

ಈ ವಿಚಾರದಲ್ಲಿ ಕಾರ್ಮಿಕರಿಗೆ ಆಡಳಿತ ವರ್ಗ ಮಾಡಿರುವ ಅನ್ಯಾಯದ ವಿರುದ್ಧ ಆಡಳಿತ ವರ್ಗವನ್ನು ಕರೆಯಿಸಿ ಕಾರ್ಮಿಕರನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ತಿಳಿಸುವ ಮೂಲಕ ಕೆಲಸವಿಲ್ಲದೆ ಪರಿತಪಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಮೂಲಕ ಕಾರ್ಮಿಕರ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಂಪ್ಲಾಯೀಸ್ ಅಸೋಸಿಯೇಶನ್ ನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: