ದೇಶಪ್ರಮುಖ ಸುದ್ದಿ

ಲಡಾಖ್ ಗಡಿ ಘರ್ಷಣೆ ಶೀಘ್ರ ಅಂತ್ಯ: ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಗೆ ಚಾಲನೆ; ರಾಜನಾಥ್ ಸಿಂಗ್

ನವದೆಹಲಿ,ಫೆ.11-ಸುದೀರ್ಘ ಲಡಾಖ್ ಗಡಿ ಘರ್ಷಣೆಗೆ ಅಂತ್ಯ ಹಾಡುವ ಸಮಯ ಬಂದಿದ್ದು, ಗಡಿಯಿಂದ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಲಡಾಖ್ ಗಡಿ ವಸ್ತುಸ್ಥಿತಿ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿದ ರಾಜನಾಥ್ ಸಿಂಗ್, ಭಾರತ-ಚೀನಾ ಕುರಿತು ಮಿಲಿಟರಿ ಹಾಗೂ ರಾಜತಾಂತ್ರಿಕ ಮಾತುಕತೆಗಳು ಶೀಘ್ರದಲ್ಲೇ ಫಲ ನೀಡಲಿವೆ ಎಂದು ಭರವಸೆ ನೀಡಿದರು.

ಪೂರ್ವ ಲಡಾಖ್‌ನ ಪ್ಯಾಂಗಾಂಗ್ ನದಿ ಕಣಿವೆಯ ಮುಂಚೂಣಿ ನೆಲೆಗಳಿಂದ ಸೈನ್ಯವನ್ನು ಹಿಂಪಡೆಯಲು ಎರಡೂ ಬಣ ಒಪ್ಪಿಕೊಂಡಿದ್ದು, ಎರಡೂ ಸೇನೆ ಈಗಾಗಲೇ ಈ ಪ್ರಕ್ರಿಯೆಗೆ ಚಾಲನೆ ನೀಡಿವೆ. ಘರ್ಷಣೆಗೆ ಕಾರಣವಾಗಬಲ್ಲ ಫಿಂಗರ್ ಪಾಯಿಂಟ್‌ಗಳಿಂದ ಸೈನ್ಯವನ್ನು ಹಿಂಪಡೆದು, ಮೂಲ ಸೇನಾ ನೆಲೆಗಳಿಗೆ ಮರಳುವ ಕುರಿತು ಭಾರತ-ಚೀನಾ ಸೇನೆಗಳ ನಡುವೆ ಅಧಿಕೃತ ಒಪ್ಪಂದವಾಗಿದೆ ಎಂದು ಹೇಳಿದರು.

ಚೀನಾದೊಂದಿಗಿನ ನಮ್ಮ ನಿರಂತರ ಮಾತುಕತೆಗಳು, ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಸೈನ್ಯವನ್ನು ಹಿಂಪಡೆಯುವ ಒಪ್ಪಂದಕ್ಕೆ ಬರಲು ಕಾರಣವಾಗಿದೆ. 9ನೇ ಸುತ್ತಿನ ಮಿಲಿಟರಿ ಮಾತುಕತೆಯನ್ವಯ ಚೀನಾ ತನ್ನ ಸೈನ್ಯ ತುಕಡಿಯನ್ನು ಉತ್ತರ ಪಾಂಗೊಂಗ್ ನದಿ ಕಣಿವೆಯ ಫಿಂಗರ್ 8ರಲ್ಲಿ ನಿಯೋಜನೆ ಮಾಡಲಿದ್ದು, ಭಾರತ ತನ್ನ ಸೈನ್ಯ ತುಕಡಿಯನ್ನು ಫಿಂಗರ್ 3ರ ಬಳಿಯ ಶಾಶ್ವತ ನೆಲೆಯಲ್ಲಿ ನಿಯೋಜನೆ ಮಾಡಲಿದೆ ಎಂದು ರಾಜನಾಥ್ ಸಿಂಗ್ ಮಾಹಿತಿ ನೀಡಿದರು.

ಈ ಒಪ್ಪಂದದನ್ವಯ ಭಾರತ-ಚೀನಾ ಹಂತ ಹಂತವಾಗಿ ಹಾಗೂ ಸಮನ್ವಯದಿಂದ ಮುಂದಿನ ಯೋಜನೆಗಳನ್ನು ಕಾರ್ಯಗತಗೊಳಿಸಲಿವೆ ಎಂದು ಈ ವೇಳೆ ಸ್ಪಷ್ಟಪಡಿಸಿದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: