ಮೈಸೂರು

ಶ್ರೀರಾಮಾನುಜ ವೈಭವಂ ನೃತ್ಯ ರೂಪಕ : ಏ25ರಂದು

ಶ್ರೀ ರಾಮಾನುಜ ಸಹಸ್ರಮಾನೋತ್ಸವದಂಗವಾಗಿ ‘ಶ್ರೀರಾಮಾನುಜ ವೈಭವಂ’ ನೃತ್ಯ ರೂಪಕವನ್ನು ಆಯೋಜಿಸಲಾಗಿದೆ ಎಂದು ಶ್ರೀ ರಾಮಾನುಜ ಸಹಸ್ರಮಾನೋತ್ಸವ ಸಮಿತಿ ಅಧ್ಯಕ್ಷ ವೀರಪಾರ್ಥಸಾರಥಿ  ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಏ.25ರಂದು ಸಂಜೆ 6ಕ್ಕೆ ಜಗನ್ಮೋಹನ ಅರಮನೆಯಲ್ಲಿ ನೃತ್ಯರೂಪಕವನ್ನು ಆಯೋಜಿಸಲಾಗಿದೆ ಹಾಗೂ ಏ.27ರಂದು ಶ್ರೀರಾಮಾನುಜ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಪ್ರಸ್ತಕಂ ಸಂತಾನ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ರಾಮಾನುಜ ಸಹಸ್ರಮಾನೋತ್ಸವ ಸಂಭ್ರಮಾಚರಣ ಸಮಿತಿ ಸಂಯುಕ್ತವಾಗಿ ಆಯೋಜಿಸಿದೆ ಎಂದು ತಿಳಿಸಿದರು.

ಕಲಾವಿದೆ ಹಾಗೂ ಸಂಗೀತ ಸಂಭ್ರಮದ ಸಂಸ್ಥಾಪಕಿ ಪಿ.ರಮಾ ಮಾತನಾಡಿ ಶ್ರೀರಾಮಾನುಜರು ಆಧ್ಯಾತ್ಮಿಕ ಚಿಂತನೆಯಿಂದ ಜಾತಿಭೇದಗಳನ್ನು ತೊಡೆದು ಜನಸಾಮಾನ್ಯರಿಗೆ ಮಾರ್ಗದರ್ಶನ ನೀಡಿದರು. ಶ್ರೀರಾಮಾನುಜರ ವಿಶಿಷ್ಟಾದ್ವೈತ ತತ್ವ ಪ್ರಚಾರಗಳ ಪರಿಕಲ್ಪನೆಗಳನ್ನೊಳಗೊಂಡ ಸಂಗೀತ ನೃತ್ಯ ವೈಭವವಾದ ‘ಶ್ರೀರಾಮಾನುಜ ವೈಭವಮ್’ ನಲ್ಲಿ ಅವರ ಹುಟ್ಟಿನಿಂದ ಹಿಡಿದು ಎಲ್ಲಾ ಪ್ರಸಂಗಗಳನ್ನು ನವಿರಾಗಿ ಪ್ರಚುರಪಡಿಸಲಾಗುವುದು.ಡಾ.ವೀಣಾಮೂರ್ತಿ ನೃತ್ಯ ಸಂಯೋಜಿಸಿದ್ದಾರೆ. ಸಾಹಿತ್ಯ ಕೆ.ಬಿ.ದೇವರಾಜನ್ ಸ್ವಾಮಿ ಹಾಗೂ ಇತರರು ತೆರೆ ಹಿಂದೆ ಶ್ರಮಿಸಿದ್ದಾರೆ. 35ಕ್ಕೂ ಹೆಚ್ಚು ಕಲಾವಿದರು ತೆರೆ ಮೇಲೆ ನೃತ್ಯ ರೂಪಕದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ಶ್ರೀರಾಮಾನುಜರು ವಿಷ್ಣುವಿನ ಅವತಾರ ಪುರುಷನಾಗಿ ಸಾಮಾನ್ಯರೊಂದಿಗೆ ಬೆರೆತು ಭಗವಂತನ ಸಾಕ್ಷಾತ್ಕಾರಗೊಳಿಸಿದರು ಎಂದು ನೃತ್ಯ ರೂಪಕದ ಸಾಹಿತ್ಯ ರಚನೆಗಾರ್ತಿ ಅಂಡಾಳ್ ಶ್ರೀರಾಮ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹಸ್ರಮಾನೋತ್ಸವ ಸಮಿತಿ ಸಂಯೋಜಕ ರಾಜಗೋಪಾಲ್  ಹಾಜರಿದ್ದರು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: