ಮೈಸೂರು

ಫೆ.13, 14 ಮತ್ತು 21 ಮೈಸೂರು ಮೈಮ್ ಟೀಂ ವತಿಯಿಂದ “ಒಂದು ಚಿತ್ರಕಥೆ”

ಮೈಸೂರು,ಫೆ.12:- ಮೈಸೂರು ಮೈಮ್ ಟೀಂ ವತಿಯಿಂದ ಪರ್ವತವಾಣಿಯವರು ರಚಿಸಿದ “ಒಂದು ಚಿತ್ರಕಥೆ” ನಾಟಕವನ್ನು ಫೆ.13, 14 ಮತ್ತು 21ರಂದು ಸಂಜೆ 7ಗಂಟೆಗೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಸಂಜೆ 7ಗಂಟೆಗೆ ಪ್ರದರ್ಶಿಸಲಾಗುತ್ತದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮೈಸೂರು ಮೈಮ್ ಟೀಮ್ ನಿರ್ದೇಶಕ ಗೌತಮ್ ಜಿ.ಪಿ ಕಳೆದ ನಾಲ್ಕು ವರ್ಷಗಳಿಂದ ಪ್ರತಿದಿನ ಬೆಳಿಗ್ಗೆ 6.45ರಿಂದ 8.15ರವರೆಗೆ ಮೈಮ್ ಮತ್ತು ಆಂಗಿಕಾಭಿನಯದ ತರಬೇತಿಯನ್ನು ಹವ್ಯಾಸಿ ರಂಗಕಲಾವಿದರಿಗೆ ಉಚಿತವಾಗಿ ನೀಡುತ್ತಿದ್ದು ಈಗಾಗಲೇ ಸಾಕಷ್ಟು ಮೂಕಾಭಿನಯದ ಪ್ರಕಾರಗಳನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಲಾಗಿದೆ. ಅಲ್ಲದೆ “ಸನ್ಮಾನ ಬೇಕಾ”, “ನನಗ್ಯಾಕೋ ಡೌಟು” , “ದಿ ಕೋರ್ಟ್ ಮಾರ್ಷಲ್” ನಂತಹ ಯಶಸ್ವಿ ನಾಟಕಗಳ ನಂತರ ಇದೀಗ 1954ರಲ್ಲಿ ಪರ್ವತವಾಣಿ ಅವರು ರಚಿಸಿದ “ ಒಂದು ಚಿತ್ರಕಥೆ” ನಾಟಕವನ್ನು ಐದು ತಿಂಗಳ ನಿರಂತರ ಅಭ್ಯಾಸದೊಂದಿಗೆ ವಿನಯ್ ನಿನಾಸಂ ಅವರ ನಿರ್ದೇಶನದಲ್ಲಿ ಫೆ.13,14 ಮತ್ತು 21ರಂದು ಕಲಾಮಂದಿರದ ಕಿರುರಂಗಮಂದಿರದಲ್ಲಿ ಸಂಜೆ 7ಕ್ಕೆ ಆಯೋಜಿಸಲಾಗಿದೆ ಎಂದರು.

ನಾಟಕದ ಅವಧಿ 65 ನಿಮಿಷಗಳಾಗಿದ್ದು ಪ್ರವೇಶ ದರ 100ರೂ. ಈ ನಾಟಕವು ಓರ್ವ ಚಿತ್ರ ಕಲಾವಿದನ ವೈಯುಕ್ತಿಕ ಜೀವನದ ದುರಂತವನ್ನು ಪ್ರತಿಬಿಂಬಿಸುತ್ತದೆ   ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: