ಕರ್ನಾಟಕಪ್ರಮುಖ ಸುದ್ದಿ

ಕಾಲೇಜು ಶಿಕ್ಷಣ ಇಲಾಖೆಯ ಅವೈಜ್ಞಾನಿಕ ಕ್ರಮ: ಡೋಲಾಯಮಾನವಾದ ಕನ್ನಡ ಉಪನ್ಯಾಸಕರ ಬದುಕು: ಟಿ.ಎಸ್.ನಾಗಾಭರಣ ಆರೋಪ

ರಾಜ್ಯ( ಬೆಂಗಳೂರು)ಫೆ.13:-  ಕಾಲೇಜು ಶಿಕ್ಷಣ ಇಲಾಖೆಯ ಅವೈಜ್ಞಾನಿಕ ಕ್ರಮದಿಂದಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ಅರೆಕಾಲಿಕ ಕನ್ನಡ ಉಪನ್ಯಾಸಕರ ಬದುಕು ಡೋಲಾಯಮಾನವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಆರೋಪಿಸಿದ್ದಾರೆ.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದ ಅರೆಕಾಲಿಕ ಕನ್ನಡ ಉಪನ್ಯಾಸಕರನ್ನು ವಜಾಗೊಳಿಸಿ, ಅವರ ಜಾಗದಲ್ಲಿ ಕಾಲೇಜಿನ ಇತರೆ ವಿಷಯಗಳ ಉಪನ್ಯಾಸಕರಿಂದ ಕನ್ನಡವನ್ನು ಬೋಧಿಸುವ ಕ್ರಮ ಕನ್ನಡ ವಿರೋಧಿ ಭಾವನೆಯಾಗಿದೆ ಎಂದು ದೂರಿದ್ದಾರೆ.

ತಾಂತ್ರಿಕ ಶಿಕ್ಷಣವನ್ನು ಪಡೆಯಬಯಸುವವರು ಹೆಚ್ಚಿನ ಪ್ರಮಾಣದಲ್ಲಿ ಬಡ, ಮಧ್ಯಮ ವರ್ಗದ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು, ಅವರಿಗೆ ವಿವಿಧ ವಿಷಯಗಳ ಪಠ್ಯಪುಸ್ತಕಗಳು ಕನ್ನಡದಲ್ಲಿ ದೊರೆತಲ್ಲಿ ಅವರ ಜ್ಞಾನ ವಿಸ್ತಾರದ ಜೊತೆಗೆ ವಿಷಯದ ಗ್ರಹಿಕೆಗೆ ಅನುಕೂಲವಾಗುತ್ತದೆ ಎಂಬ ನಿರ್ಣಯಕ್ಕೆ ಈ ಹಿಂದಿನ ಸಭೆಯಲ್ಲಿ ಬರಲಾಗಿತ್ತು. ಆದರೆ ಪ್ರಸ್ತುತ ಇದಕ್ಕೆ ತದ್ವಿರುದ್ಧವಾಗಿ ಕಾಲೇಜು ಶಿಕ್ಷಣ ಇಲಾಖೆ ನಡೆದುಕೊಂಡಿದೆ ಎಂದು ಹೇಳಿದ್ದಾರೆ.

ಕನ್ನಡ ನಾಡಿನಲ್ಲಿಯೇ ರಾಜ್ಯಭಾಷೆ ಕನ್ನಡಕ್ಕೆ ಒದಗಿ ಬಂದಿರುವ ಈ ದುಸ್ಥಿತಿ, ಅತ್ಯಂತ ನೋವಿನ ಸಂಗತಿಯಾಗಿದೆ. ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಸದರಿ ಆದೇಶವನ್ನು ಹಿಂಪಡೆಯುವಂತೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರೊ.ಹಿ.ಚಿ ಬೋರಲಿಂಗಯ್ಯನವರ ವರದಿಯ ಶಿಫಾರಸ್ಸಿನ ಮೇರೆಗೆ ಸರ್ಕಾರ, 2015-16ನೇ ಸಾಲಿನಿಂದ ವೃತ್ತಿ ಶಿಕ್ಷಣದಲ್ಲಿ (ಇಂಜಿನಿಯರಿಂಗ್, ವೈದ್ಯಕೀಯ, ಕಾನೂನು ಹಾಗೂ ಕೃಷಿ ಇತ್ಯಾದಿ ವಿಭಾಗಗಳಲ್ಲಿ) ಕಡ್ಡಾಯವಾಗಿ ಕನ್ನಡವನ್ನು ಬೋಧಿಸುವಂತೆ ಆದೇಶಿಸಿದೆ. ಅದರಂತೆ  ರಾಜ್ಯ ಸರ್ಕಾರಿ ಡಿಪ್ಲೊಮಾ/ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅರ್ಹ ಅರೆಕಾಲಿಕ ಕನ್ನಡ ಉಪನ್ಯಾಸಕರನ್ನು ನೇಮಿಸಿಕೊಂಡು 3 ಮತ್ತು 4ನೇ ಸೆಮಿಸ್ಟರ್ಗೆ ಸರ್ಕಾರದ ಆದೇಶದನ್ವಯ ಕಡ್ಡಾಯವಾಗಿ ಕನ್ನಡವನ್ನು ಒಂದು ಭಾಷೆಯಾಗಿ ಬೋಧಿಸುವಂತೆ, ಸಾಂಸ್ಕೃತಿಕ ಕನ್ನಡ ಮತ್ತು ಬಳಕೆ ಕನ್ನಡ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸುವ ಬಗ್ಗೆ ಹಾಗೂ ಕನ್ನಡದಲ್ಲಿ ಪಡೆಯುವ ಅಂಕಗಳನ್ನು ಅಂಕಪಟ್ಟಿಯಲ್ಲಿ ಪರಿಗಣಿಸುವ ಬಗ್ಗೆ ಅಗತ್ಯ ಕ್ರಮವಹಿಬೇಕು.  ಇಲ್ಲದಿದ್ದಲ್ಲಿ  ಕಾಲೇಜು ಶಿಕ್ಷಣ ಇಲಾಖೆಯ ನಿರಂತರ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ಕನ್ನಡಪರ ಸಂಘಟನೆ/ಸಾಹಿತಿಗಳೊಂದಿಗೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯಲ್ಲಿ ಅಗತ್ಯವೆನಿಸದ ಹಾಗೂ ಅವೈಜ್ಞಾನಿಕವಾದ ನಿಯಮಗಳನ್ನು ಅಳವಡಿಸಿ, ಭಾಷಾ ಅಧ್ಯಯನಕ್ಕೆ ತೊಡಕುಂಟುಮಾಡಿದ್ದ ಕಾಲೇಜು ಶಿಕ್ಷಣ ಇಲಾಖೆಯ ಕ್ರಮವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: