
ಮೈಸೂರು
‘ಎಸ್ವಿಜಿ ವಿಶ್ವಪ್ರಜ್ಞ ರೋಟರಾಕ್ಟ್ ಕ್ಲಬ್’ನ ಅನುಸ್ಥಾಪನಾ ಸಮಾರಂಭ
ಮೈಸೂರು, ಫೆ.15:- ನಗರದ ದಟ್ಟಗಳ್ಳಿಯಲ್ಲಿರುವ ಎಸ್ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಮೈಸೂರು ದಕ್ಷಿಣ ಪೂರ್ವ ರೋಟರಿ ಕ್ಲಬ್ ಸಹಯೋಗದೊಂದಿಗೆ ಇತ್ತೀಚೆಗೆ ಕಾಲೇಜು ಆವರಣದಲ್ಲಿ ಎಸ್ವಿಜಿ ವಿಶ್ವಪ್ರಜ್ಞ ರೋಟರಾಕ್ಟ್ ಕ್ಲಬ್ ನ ಅನುಸ್ಥಾಪನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರಾದ ಟಿ.ಎಸ್.ಸುಬ್ರಮಣ್ಯ ಜ್ಯೋತಿ ಬೆಳಗಿಸಿದರು. ಬಳಿಕ ಮಾತನಾಡಿದ ಅವರು, ರೋಟರಾಕ್ಟ್ ಕ್ಲಬ್ ನಲ್ಲಿ ಪಾಲ್ಗೊಳ್ಳುವುದರ ಮೂಲಕ ವಿಶ್ವಶಾಂತಿಯನ್ನು ಕಾಪಾಡುವ ಹಾಗೂ ಜನಸೇವೆಯನ್ನು ಮಾಡುವ ಕಾರ್ಯ ಇಂದಿನ ಯುವ ಜನತೆಯಿಂದ ಆಗಬೇಕಾಗಿದೆ. ಇಂದು ನಿಮಗೆ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕ್ಲಬ್ ನ ಎಲ್ಲಾ ಕಾರ್ಯಚಟುವಟಿಕೆಯಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ ನೀವು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೂರು ವರ್ಷಗಳ ಹಿಂದೆಯೇ ದೂರದೃಷ್ಟಿಯನ್ನು ಇಟ್ಟುಕೊಂಡು ಮೈಸೂರು ನಗರವನ್ನು ಅಭಿವೃದ್ಧಿಪಡಿಸಿದ್ದರಿಂದಲೇ ಮೈಸೂರಿಗೆ ಇಂದಿಗೂ ಉತ್ತಮ ಹೆಸರಿದೆ. ಈ ರೀತಿಯ ದೂರದೃಷ್ಟಿಯನ್ನು ನೀವು ಕೂಡ ಇಟ್ಟುಕೊಂಡು ಕ್ಲಬ್ನ ಮುಖಾಂತರ ಉತ್ತಮ ಕಾರ್ಯ ಚಟುವಟಿಕೆಗಳನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.
ರೋಟರಾಕ್ಟ್ ಸಂಘದ ವಿದ್ಯಾರ್ಥಿ ಪದಾಧಿಕಾರಿಯಾಗಿ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಅನುಷಾ ಹಿರೇವಡೆಯರ್ ಹಾಗೂ ಇತರ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಮೈಸೂರು ದಕ್ಷಿಣ ಪೂರ್ವದ ರೋಟರಿ ಕ್ಲಬ್ ನ ಅನುಸ್ಥಾಪನಾಧಿಕಾರಿ ರೋ. ಎಂ.ರಾಜೀವ್ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷ ದ್ವಿತೀಯ ಪಿಯುಸಿನಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಕಾವ್ಯ ಬಿ, ಸುಜನ್ ಮರಿಯಾ, ಸುಪ್ರಿಯಾ, ಸಿ.ಎ.ಪವನ್ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಡಾ.ಕೆಂಪೇಗೌಡ, ಪ್ರಾಂಶುಪಾಲರಾದ ರಚನ್ ಅಪ್ಪಣಮಯ್ಯ, ಯುವರಾಜ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಎಂ.ಎಸ್.ಮಹೇಶ್, ಮೈಸೂರು ದಕ್ಷಿಣ ಪೂರ್ವದ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ.ರಾಜ್ ಭಟ್, ಜಿಲ್ಲಾ ರೋಟರಾಕ್ಟ್ ಪ್ರತಿನಿಧಿ ಅಭಿಜಿತ್ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)