ಮೈಸೂರು

ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಸುರಕ್ಷಿತವಾಗಿ  ರಥದ ಮೇಲೆ ಪ್ರತಿಷ್ಠಾಪಿಸಲು ನೂತನ ಲಿಫ್ಟ್ ಸಿದ್ಧ : ಶೀಘ್ರದಲ್ಲೇ ಹಸ್ತಾಂತರ

ಮೈಸೂರು,ಫೆ.15:- ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವದ ವೇಳೆ ನಡೆಯಲಿರುವ ರಥೋತ್ಸವದಲ್ಲಿ ನಾಡದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಸುರಕ್ಷಿತವಾಗಿ  ರಥದ ಮೇಲೆ ಪ್ರತಿಷ್ಠಾಪಿಸಲು ನೂತನ ಲಿಫ್ಟ್ ಸಿದ್ಧಗೊಂಡಿದ್ದು ಶೀಘ್ರದಲ್ಲೇ ರೈಲ್ವೆ ಇಲಾಖೆ ಚಾಮುಂಡೇಶ್ವರಿಯ ಆಡಳಿತ ಮಂಡಳಿಗೆ ಇದನ್ನು ಹಸ್ತಾಂತರಿಸಲಿದೆ.

ಸುಮಾರು 30ರಿಂದ 40ಅಡಿ ಎತ್ತರವಿರುವ ರಥದ ಮಧ್ಯೆ ಚಾಮುಂಡೇಶ್ವರಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲು ಪೀಠದ ವ್ಯವಸ್ಥೆ ಮಾಡಲಾಗಿದೆ. ಆಭರಣಗಳಿಂದ ಅಲಂಕೃತಗೊಂಡ ಉತ್ಸವ ಮೂರ್ತಿಯನ್ನು ಮೇಲೆತ್ತಿ ಸುರಕ್ಷಿತವಾಗಿ ಪ್ರತಿಷ್ಠಾಪಿಸಲು ನೂರಾರು ವರ್ಷದ ಹಿಂದಿನ ಮರದ ಲಿಫ್ಟ್ ಬಳಸಲಾಗುತ್ತಿತ್ತು. ಶಿಥಿಲಾವಸ್ಥೆಯಲ್ಲಿದ್ದ ಆ ಲಿಫ್ಟ್ ನ್ನು ಪ್ರತಿವರ್ಷ ದುರಸ್ಥಿ ಮಾಡಿಸಿ ಬಳಸಲಾಗುತ್ತಿತ್ತು. ನೈರುತ್ಯ ರೈಲ್ವೆಯ ಸಿಡಬ್ಲ್ಯೂಎಂ ಸೆಂಟ್ರಲ್ ವರ್ಕ್ ಶಾಪ್ ನ ಮೆಕ್ಯಾನಿಕಲ್ ಮಿಲ್ ರೈಟ್ ಶಾಪ್ ಗೆ ಹೊಸದಾಗಿ ಕಬ್ಬಿಣದ ಲಿಫ್ಟ್ ನಿರ್ಮಾಣ ಮಾಡಿಕೊಡುವಂತೆ ಕೋರಿ ಇದಕ್ಕೆ ವೆಚ್ಚವಾಗುವ 5.20 ಲಕ್ಷರೂ.ನೀಡಲು ದೇವಾಲಯದ ಆಡಳಿತ ಮಂಡಳಿ ಒಪ್ಪಿತ್ತು.

ನೈರುತ್ಯ ರೈಲ್ವೆ  ಮೆಕ್ಯಾನಿಕಲ್ ಮಿಲ್ ರೈಟ್ ಮೈಸೂರು ವಿಭಾಗೀಯ ಕೇಂದ್ರ ವರ್ಕ್ ಶಾಪ್ ಮೂಲಕ ಪಾರಂಪರಿಕ  ಶೈಲಿಯ ಹೊಸ ಲಿಫ್ಟ್ ನ್ನು 45ದಿನಗಳಲ್ಲಿ ಸಿದ್ಧಗೊಳಿಸಿದೆ. ಮರದ ಲಿಫ್ಟ್ ಮಾದರಿಯಲ್ಲೇ ಕಬ್ಬಿಣದ ಹೊಸ ಲಿಫ್ಟ್ ನಿರ್ಮಿಸಲಾಗಿದ್ದು 5-6 ಟನ್ ತೂಕ ಹಾಗೂ 5.5ಮೀಟರ್ ಎತ್ತರವಿದ್ದು ಸುಮಾರು 300ಕೆ.ಜಿ. ಭಾರ ಎತ್ತುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: