ದೇಶಪ್ರಮುಖ ಸುದ್ದಿ

ಉತ್ತರಾಖಂಡದಲ್ಲಿನ ಹಿಮಸ್ಫೋಟ ದುರಂತ: ಮೃತರ ಸಂಖ್ಯೆ  53ಕ್ಕೆ ಏರಿಕೆ

ತಪೋವನ,(ಉತ್ತರಾಖಂಡ),ಫೆ.15-ಉತ್ತರಾಖಂಡದಲ್ಲಿನ ಹಿಮಸ್ಫೋಟ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.

ಅವಶೇಷಗಳ ಅಡಿಯಿಂದ ಸೋಮವಾರದಂದು ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಇದರಿಂದ ಮೃತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಮೋಲಿ ಜಿಲ್ಲೆಯ ಆದಿತಿ ಸುರಂಗ ಹಾಗೂ ಎನ್‌ಟಿಪಿಸಿಯ ತಪೋವನ-ವಿಷ್ಣುಗಡ ಯೋಜನೆ ಪ್ರದೇಶದಿಂದ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವಾತಿ ಎಸ್. ಭದೋರಿಯಾ ತಿಳಿಸಿದ್ದಾರೆ.

ಕೆಸರು ತುಂಬಿದ ಸುರಂಗದಲ್ಲೀಗ ಉತ್ಖನನ ಮಾಡುವ ಯಂತ್ರದಿಂದ ಮಾತ್ರ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯ. ಕ್ಯಾಮರಾ ಅಥವಾ ಪೈಪ್ ಲಗತ್ತಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದರು.

ತಪೋವನ ಎಸ್‌ಎಫ್‌ಟಿನಲ್ಲಿ ಶನಿವಾರ ಕೊರೆಯುವ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಅಲ್ಲದೆ ಒಳಗೆ ಸಿಲುಕಿದವರ ಪತ್ತೆಯಾಗಿ ಕ್ಯಾಮರಾ ಆಳವಡಿಸುವ ಪ್ರಯತ್ನವು ಕೆಸರು ತುಂಬಿದ ನೀರಿನಿಂದಾಗಿ ವಿಫಲವಾಗಿತ್ತು. ಫೆ.7ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತ ಪರಿಣಾಮ ದಿಢೀರ್ ಪ್ರವಾಹ ಉಂಟಾಗಿ ದುರಂತ ಸಂಭವಿಸಿತ್ತು. 151 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರವಾಹದಲ್ಲಿ ಸಿಲುಕಿರುವ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣವೆನಿಸಿದೆ. ಹಾಗಿದ್ದರೂ ಭರವಸೆಯನ್ನು ಕೈಬಿಟ್ಟಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಪಾಂಗ್ ಹೊರತುಪಡಿಸಿದ ದುರಂತ ಪೀಡಿತ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜನ್ನು ಪುನಃ ಸ್ಥಾಪಿಸಲಾಗಿದೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.  (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: