ಕರ್ನಾಟಕ

ಎಸಿ ಆದೇಶ ರದ್ದುಪಡಿಸಿದ ಕೆಎಟಿ : ಸ್ವತ್ತು ಮರಳಿಸಲು ಅಪ್ಪಣೆ

ಬೆಳಗಾವಿ: ಇಲ್ಲಿನ ಮೆಥೋಡಿಸ್ಟ್ ಚರ್ಚ್ ಆವರಣದ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಡೆದ ಇಬ್ಬರ ನಡುವಿನ ವಿವಾದದಲ್ಲಿ ಸರಕಾರಿ ಜಾಗ ಎಂದು ಮೂಗುತೂರಿಸಿ ಆದೇಶಿಸಿದ್ದ ಜಿಲ್ಲಾಡಳಿತಕ್ಕೆ ಮುಖಭಂಗವಾಗಿದೆ. ಕುಲಕರ್ಣಿ ಕುಟುಂಬ ಮತ್ತು ಮೆಥೋಡಿಸ್ಟ್ ಚರ್ಚ್ ಇನ್ ಇಂಡಿಯಾ ನಡುವೆ ವಿವಾದ ನಡೆದಿದ್ದು ಈ ಪೈಕಿ ತಮ್ಮ ಜಾಗದ ಹಕ್ಕಿನ ಕುರಿತು ಉಚ್ಛ ನ್ಯಾಯಾಲಯದಿಂದ ತೀರ್ಪು ತರುವಲ್ಲಿ ಕುಲಕರ್ಣಿ ಕುಟುಂಬ ಯಶಸ್ವಿಯಾಗಿತ್ತು.

ಈ ನಂತರ ನಡೆದ ಇತ್ತೀಚಿನ ಬೆಳವಣಿಗೆಗಳಲ್ಲಿ ಚರ್ಚ್ ಆವರಣದ ಜಾಗ ಸರಕಾರದ್ದು ಎಂದು ಆದೇಶಿಸಿದ್ದ ಬೆಳಗಾವಿ ಉಪವಿಭಾಗಾಧಿಕಾರಿ ಆದೇಶವನ್ನು ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ(ಕೆಎಟಿ) ಶನಿವಾರ ರದ್ದುಗೊಳಿಸಿದೆ. ಉಪವಿಭಾಗಾಧಿಕಾರಿ ಆದೇಶ ಕಾನೂನು ಸಮ್ಮತವಲ್ಲದ, ದೋಷಪೂರಿತ, ರದ್ದುಪಡಿಸುವಂತದ್ದಾಗಿದೆ. ಅಲ್ಲದೇ ಮೇಲ್ಮನವಿದಾರರು ಅಧಿಕಾರಿ ಲೋಪಪೂರಿತ ಆದೇಶ ಹೊರಡಿಸಿದ ಬಗ್ಗೆ ತನ್ನ ಮುಂದೆ ರುಜುವಾತುಪಡಿಸಿದ್ದಾರೆ ಎಂದು ಕೋರ್ಟ್ ಸ್ಪಷ್ಟ ಅಭಿಪ್ರಾಯಪಟ್ಟಿದೆ.

ಪ್ರಕರಣ ಸಂಖ್ಯೆ ಕೆಎಲ್ ಆರ್/79ಎ&79ಬಿ.ಸಿಆರ್-06/2016-17ರಂತೆ ಕಳೆದ ಡಿಸೆಂಬರ್ 12 ರಂದು ಬೆಳಗಾವಿ ಎಸಿ ಮಾಡಿದ್ದ ಆದೇಶವನ್ನು ರದ್ದುಗೊಳಿಸಿದೆ. 2ನೇ ಎದುರುದಾರರು ಮಹಜರ ಮೂಲಕ 24 ಎಕರೆ ಕಟ್ಟಡ ಸಹಿತ ವಶಕ್ಕೆ ಪಡೆದಿದ್ದರೆ ಸದರಿ ಮಹಜರ್ ಕರ್ನಾಟಕ ಭೂಸುಧಾರಣಾ ಕಾಯ್ದೆ 1961 ರ ಕಲಂ 130 ರ ಅನುಗುಣವಾಗಿ ಇಲ್ಲದ್ದರಿಂದ ಭೂ- ಸ್ವಾಧೀನತೆ ಅಕ್ರಮವಾಗಿದ್ದು ಎದುರುದಾರರು ಮೇಲ್ಮನವಿದಾರರಿಗೆ ಸದರಿ ಸ್ವತ್ತನ್ನು ಮರಳಿಸತಕ್ಕದ್ದು ಎಂದು ಆದೇಶಿಸಿದೆ. ಕೆಎಟಿ ರೆಗ್ಯುಲೇಶನ್ 53(ಎ)ರಂತೆ ಈ ತೀರ್ಪಿನ ಪ್ರತಿಯನ್ನು ಎದುರುದಾರರ ಫೈಲ್‍ನಲ್ಲಿ ಇರಿಸಿ ವಾಪಸ್ ಕಳಿಸುವಂತೆಯೂ ಅಧ್ಯಕ್ಷ ಕಪಿಲ್ ಮೋಹನ್ ಹಾಗೂ ಸದಸ್ಯ ಜಿಲ್ಲಾ ನ್ಯಾಯಾಧೀಶ ಎಸ್.ಎಂ. ಕಲಾಲ ಆದೇಶ ನೀಡಿದ್ದಾರೆ. ಕುಲಕರ್ಣಿ ಕುಟುಂಬ, ಢಮ್ಮನಗಿ ಮತ್ತು ಸಾನು ಡೆವಲಪರ್ಸ್ (ಶಂಕರ ಮುನವಳ್ಳಿ) ಕೆಎಟಿಗೆ ಮೇಲ್ಮನವಿ ಸಲ್ಲಿಸಿದ್ದರು.

(CT)

Leave a Reply

comments

Related Articles

error: