ಮೈಸೂರು

ಕರ್ತವ್ಯ ನಿರ್ವಹಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು : ಕಾಳಮ್ಮ ಕೆಂಪರಾಮಯ್ಯ ಎಚ್ಚರಿಕೆ

ಕೆಲ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದು, ಇದೇ ರೀತಿ ಮುಂದುವರೆದರೆ  ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಎಚ್ಚರಿಕೆ ನೀಡಿದರು.
ಮಂಗಳವಾರ ಮೈಸೂರು ನಜರ್ ಬಾದ್ ನಲ್ಲಿರುವ ತಾಲೂಕು ಪಂಚಾಯತ್ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು ಕರ್ತವ್ಯ ನಿರ್ವಹಣೆಯಲ್ಲಿ ಉದಾಸೀನತೆ ತೋರುವ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಸರ್ಕಾರ ವಹಿಸಿದ ಜವಾಬ್ದಾರಿಯನ್ನು ತಾಲೂಕು ಪಂಚಾಯತ್ ವ್ಯಾಪ್ತಿಗೆ ಬರುವ ಕೆಲ ಅಧಿಕಾರಿಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಅಲ್ಲದೆ ನನ್ನ ಸ್ವಗ್ರಾಮ ದೂರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಶೀಘ್ರದಲ್ಲೇ ವೈದ್ಯರನ್ನು ನೇಮಕ ಮಾಡಿ ಎಂದು ಸೂಚನೆ ನೀಡಿದರೂ ಅಧಿಕಾರಿಗಳು ಈ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಿಡಿಮಿಡಿಗೊಂಡ ಅವರು ಕೂಡಲೇ ವೈದ್ಯರನ್ನು ನೇಮಕ ಮಾಡಿ ಗ್ರಾಮದ ಜನತೆಗೆ ಸೇವೆ ಒದಗಿಸಿ ಎಂದು ತಾಕೀತು ಮಾಡಿದರು. ಅಲ್ಲದೆ 2016-17ರ ಮೇ ಸಾಲಿನಲ್ಲಿ ಕೃಷಿ, ರೇಷ್ಮೆ, ತೋಟಗಾರಿಕೆ, ಆರೋಗ್ಯ, ಪಶುಪಾಲನೆ, ಮೀನುಗಾರಿಕೆ ಇಲಾಖೆಗಳು ನೂರಕ್ಕೆ ನೂರು ಪ್ರಗತಿ ಸಾಧಿಸಿರುವುದರ ಕುರಿತು ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಎನ್.ಬಿ.ಮಂಜು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ ನಾಯಕ, ಇಒ ಲಿಂಗರಾಜಯ್ಯ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: