ಮೈಸೂರು

ಏ.22 ಶೂನ್ಯ ನೆರಳು ದಿನ: ಕೌತುಕವನ್ನು ವೀಕ್ಷಿಸಲು ಕಿರಣ್ ಪ್ರಸಾದ್ ಕರೆ

ಮೈಸೂರಿನ ಶಾರದ ವಿಲಾಸ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಶೂನ್ಯ ನೆರಳು ದಿನ ಕುರಿತಾಗಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹವ್ಯಾಸಿ ಖಗೋಳತಜ್ಞ ಮತ್ತು ಎಕ್ಸಲ್ ಪಬ್ಲಿಕ್ ಶಾಲೆಯ ಖಗೋಳ ವಿಜ್ಞಾನ ಶಿಕ್ಷಕ ಕಿರಣ್ ಪ್ರಸಾದ್‍ ಮಾತನಾಡಿ  ಖಗೋಳ ವಿಜ್ಞಾನ ಅತ್ಯಂತ ಕುತೂಹಲಕಾರಿ ಮತ್ತು ವಿಸ್ಮಯಕಾರಿ. ಖಗೋಳದ ವಿಸ್ಮಯಗಳು ಅನೇಕ.  ಅವುಗಳನ್ನು ತಿಳಿದುಕೊಳ್ಳುತ್ತಾ ಹೋದರೆ ಕುತೂಹಲ ಹೆಚ್ಚುತ್ತದೆ. ಹಗಲು ರಾತ್ರಿ, ಋತುಮಾನಗಳು ಹೇಗೆ ಉಂಟಾಗುತ್ತವೆ, ಸೂರ್ಯಗ್ರಹಣ, ಚಂದ್ರಗ್ರಹಣ, ಶುಕ್ರ ಮತ್ತು ಬುಧ ಸಂಕ್ರಮಣ ಮುಂತಾದ ಅನೇಕ ಖಗೋಳ ವಿಸ್ಮಯಗಳು ನಮಗೆ ನೋಡ ಸಿಗುತ್ತವೆ. ಇವುಗಳಂತೆ ಮತ್ತೊಂದು ವಿಸ್ಮಯ ಸಂಗತಿ ಶೂನ್ಯ ನೆರಳು ದಿನ. ಸೂರ್ಯ ಸರಿಯಾಗಿ ನಮ್ಮ ನೆತ್ತಿಯ ಮೇಲೆ ಹಾದು ಹೋದಾಗ ಅಂದರೆ ಸೂರ್ಯನ ಕಿರಣಗಳು 90 ಡಿಗ್ರಿಯಲ್ಲಿ ಬಿದ್ದಾಗ ನಮ್ಮ ನೆರಳು ನಮ್ಮ ಕಾಲಿನ ಅಡಿಯಲ್ಲಿ ಇರುತ್ತದೆ. ಅಂದರೆ ನೆರಳು ಅಕ್ಕ ಪಕ್ಕದಲ್ಲಿ ಉಂಟಾಗುವುದಿಲ್ಲ, ಇದನ್ನೇ ಶೂನ್ಯ ನೆರಳು ಎನ್ನುತ್ತಾರೆ ಎಂದರು.

ಶೂನ್ಯ ನೆರಳು 23.5 ಡಿಗ್ರಿ ದಕ್ಷಿಣ ಅಕ್ಷಾಂಶ (ಮಕರ ಸಂಕ್ರಾಂತಿ ವೃತ್ತ) ಮತ್ತು 23.5 ಡಿಗ್ರಿ ಉತ್ತರ (ಕರ್ಕಾಟಕ ವೃತ್ತ) ಇವುಗಳ ನಡುವೆ ಉಂಟಾಗುತ್ತದೆ. ಇವುಗಳಿಂದ ಆಚೆ ಇರುವ ಪ್ರದೇಶಗಳಲ್ಲಿ ಶೂನ್ಯ ನೆರಳು ಉಂಟಾಗುವುದೇ ಇಲ್ಲ. ನಮ್ಮ ದೇಶದಲ್ಲಿ ಅದೃಷ್ಟವೆಂಬಂತೆ  ವರ್ಷದಲ್ಲಿ ಎರಡು  ಬಾರಿ ಶೂನ್ಯನೆರಳು ನೋಡುವ ಅವಕಾಶವಿದೆ. ಶೂನ್ಯ ನೆರಳು ದಿನ  ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಮೈಸೂರಿನಲ್ಲಿ ಈ ವರ್ಷಏಪ್ರಿಲ್ 22 ಮತ್ತುಆಗಸ್ಟ್ 20 ರಂದು ನೋಡಬಹುದಾಗಿದೆ ಎಂದು  ತಿಳಿಸಿದರು. ಕ್ರಿಸ್ತಪೂರ್ವ 276 ರಲ್ಲಿ ಗ್ರೀಕ್ ನ ಗಣಿತಜ್ಞ ಏರೋಟಸ್ತೇನ್ ಶೂನ್ಯ ನೆರಳು ದಿನವನ್ನು ಉಪಯೋಗಿಸಿಕೊಂಡು ಭೂಮಿಯ ತ್ರಿಜ್ಯವನ್ನು ನಿಖರವಾಗಿ ಅಳತೆ ಮಾಡಿದ್ದನು. ಅನೇಕ ವಿಜ್ಞಾನಿಗಳು ಶೂನ್ಯನೆರಳು ದಿನವನ್ನು ನೋಡಲು ಅದು ನಡೆಯುವ ದೇಶಗಳಿಗೆ ಹೋಗಿ  ಕಾಯುತ್ತಾರೆ. ಶೂನ್ಯ ನೆರಳು ನಿರ್ದಿಷ್ಠ ದಿನದ ಮಧ್ಯಾಹ್ನದಲ್ಲಿ ಉಂಟಾಗುತ್ತದೆ. ಆಯಾ ಸ್ಥಳದ ಮಧ್ಯಾಹ್ನದ ಸಮಯ (ಸೂರ್ಯ ಸರಿಯಾಗಿ ನೆತ್ತಿ ಮೇಲೆ ಬರುವ ಸಮಯ) ಬೇರೆ ಬೇರೆಯಾಗಿರುತ್ತದೆ. ಈ ಸಮಯದ ಅವಧಿ ಬೆಳಿಗ್ಗೆ 11:55 ರಿಂದ 12:25 ರವರೆಗೆಇರುತ್ತದೆ. ಎಲ್ಲರೂ ಶೂನ್ಯ ನೆರಳನ್ನು ಸುಲಭವಾಗಿ ವೀಕ್ಷಿಸಬಹುದು. ನೇರವಾಗಿ ನಿಂತಕಬ್ಬಿಣದ ಕಂಬ ಶೂನ್ಯ ನೆರಳು ದಿನದಂದು ನೆರಳನ್ನು ಉಂಟು ಮಾಡುವುದಿಲ್ಲ ಅಥವಾ ಸಮತಟ್ಟ ಮೇಲ್ಮೈ ಮೇಲೆ ನೆಲಕ್ಕಿಂತ ಸ್ಪಲ್ಪ ಮೇಲೆ ಪಾರದರ್ಶಕ ಗಾಜು ಇರಿಸಿ ಅದರ ಮೇಲೆ ಇಟ್ಟ ಲೋಟದ ನೆರಳು ಅದರ ಕೆಳಗೆ ಉಂಟಾಗುತ್ತದೆ. ಇಂತಹ ವಿಸ್ಮಯಗಳು ಎಲ್ಲಾ ದೇಶಗಳಲ್ಲಿ ಎಲ್ಲರಿಗೂ ನೋಡುವ ಅವಕಾಶ ಸಿಗುವುದಿಲ್ಲ. ನಮಗೆ  ಈ  ಅವಕಾಶ ಸಿಕ್ಕಿದೆ ಆದ್ದರಿಂದ ಎಲ್ಲರೂ ಏಪ್ರಿಲ್ 22 ರಂದು ವೀಕ್ಷಣೆ ಮಾಡಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎಸ್.ಸುರೇಶ್‍ ವಹಿಸಿದ್ದರು. ಈ ಸಂದರ್ಭ ಮೈಸೂರ್ ಸೈನ್ಸ್ ಫೌಂಡೇಷನ್‍ ಅಧ್ಯಕ್ಷ  ಸಿ.ಕೃಷ್ಣೇಗೌಡ, ಕಾರ್ಯದರ್ಶಿ ಜಿ.ಬಿ.ಸಂತೋಷ್‍ಕುಮಾರ್  ಮತ್ತು ಸದಸ್ಯ  ಜಿ.ಕೆ.ಕಾಂತರಾಜ್‍ ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: