ಪ್ರಮುಖ ಸುದ್ದಿಮೈಸೂರು

ಪ್ರಾಣಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ : ಸಚಿವ ಪ್ರಭು ಚವ್ಹಾಣ್

ಜಿಲ್ಲಾ ಆಸ್ಪತ್ರೆ / ಪಾಲಿಕ್ಲಿನಿಕ್ ಕಟ್ಟಡ ಲೋಕಾರ್ಪಣೆ

ಮೈಸೂರು,ಫೆ.17:- ಹೈನುಗಾರಿಕೆ  ಮಾಡುವವರು ತಮ್ಮ ಪಶು, ಎಮ್ಮೆಗಳ ಆರೋಗ್ಯ ಪರಿಸ್ಥಿತಿಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ಕರ್ನಾಟಕ ರಾಜ್ಯ ಪಶು ಸಂಗೋಪನಾ ಸಚಿವರಾದ ಪ್ರಭು.ಬಿ.ಚವ್ಹಾಣ್ ಅಭಿಪ್ರಾಯ ಪಟ್ಟರು.

ಅವರಿಂದು ಅವರು ಇಂದು ಬೆಳಿಗ್ಗೆ ನಗರದ ಧನ್ವಂತರಿ ರಸ್ತೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಸ್ಪೆಷಾಲಿಟಿ ಪಶು ವೈದ್ಯಕೀಯ ಆಸ್ಪತ್ರೆ ಮೈಸೂರು ಇವರ ವತಿಯಿಂದ 2.78 ಕೋಟಿ ರೂ.ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಪಶು ಆಸ್ಪತ್ರೆ/ಪಾಲಿಟೆಕ್ನಿಕ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಇಂದು ರಾಜ್ಯವು ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ 2ನೇ ಸ್ಥಾನಗಳಿಸಿರುವುದು ಸಂತಸದ ಸಂಗತಿ. ಇಷ್ಟೊಂದು ಬೃಹತ್ ಮಟ್ಟದ ಹಾಲು ಉತ್ಪಾದನೆಗೆ ನಮ್ಮಲ್ಲಿ ಉತ್ತಮ ಗುಣಮಟ್ಟದ ಪಶು-ಎಮ್ಮೆ ತಳಿಗಳಿರುವುದೇ ಪ್ರಮುಖ ಕಾರಣ. ಇವುಗಳ ಆರೋಗ್ಯ ಪರಿಸ್ಥಿತಿ ಉತ್ತಮಾಗಿದ್ದರೆ ಅವು ನೀಡುವ ಹಾಲು ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ ಎಂದರು.

ಇಂದು ಹೈನುಗಾರಿಕೆ ಉದ್ಯಮ ಉತ್ತಮ ಆದಾಯ ತರುವ ಉದ್ಯಮಗಳಲ್ಲೊಂದಾಗಿದ್ದು ಹೆಚ್ಚು ಮಂದಿ ಇದನ್ನೇ ಅವಲಂಬಿಸಿದ್ದಾರೆ. ಈ ಉದ್ಯಮವನ್ನು ಕೈಗೊಂಡಿರುವವರು ಮೊದಲು ತಮ್ಮ ಪಶುಗಳು ಮತ್ತು ಎಮ್ಮೆಗಳ ಆರೋಗ್ಯ ಪರಿಸ್ಥಿತಿಯ ಕಡೆ ಹೆಚ್ಚು ಗಮನ ಹರಿಸುವುದು ಬಹಳ ಅವಶ್ಯ. ನಮಗೆ ಕೊಂಚ ಆರೋಗ್ಯ ಕೆಟ್ಟ ಕೂಡಲೇ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ತೆಗೆದುಕೊಳ್ಳುವಂತೆ  ಪಶು ಪೋಷಕರು ತಮ್ಮ ಜಾನುವಾರುಗಳ ಬಗ್ಗೆಯೂ ಇದೇ ರೀತಿಯ ಆಸಕ್ತಿ ತೋರುವಂತೆ ಹೇಳಿದರು.

ರಾಜ್ಯ ಸರ್ಕಾರವು ಪಶು ಸಂಗೋಪನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ಇಲಾಖೆಯಲ್ಲಿ ಬಹಳಷ್ಟು ಹುದ್ದೆಗಳು ತೆರವು ಇದ್ದು, ಅವುಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಸಚಿವ ಸಂಪುಟದಲ್ಲಿ ಈಗಾಗಲೇ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ 2021-22ನೇ ಸಾಲಿನ ಆಯ-ವ್ಯಯ ಮಂಡನೆಯಲ್ಲಿದ್ದು ಇದರಲ್ಲಿ ಈ ಬಗ್ಗೆ ಸರ್ಕಾರವು ತನ್ನ ನಿಲುವನ್ನು ತಿಳಿಸಲಿದೆ ಎಂದು ಹೇಳಿದ ಸಚಿವರು ಈ ನೂತನ ಕಟ್ಟಡದಲ್ಲಿ ವಿವಿಧ ರೀತಿಯ ಸೇವೆಗಳು ಲಭ್ಯವಿರುವುದರೊಂದಿಗೆ ತುರ್ತು ಸಂದರ್ಭದಲ್ಲಿ 1962 ಈ ಸಂಖ್ಯೆಗೆ ದೂರವಾಣಿ ಕರೆ ಮಾಡಿ ಪಶು ವೈದ್ಯರನ್ನು ಸಂಪರ್ಕಿಸುವ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ, ನಗರದ ಪಶು ಪಾಲಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಪ್ರಾಣಿಗಳಿಗೆ ರಕ್ಷಣೆ ಮತ್ತು ಪ್ರಾಣಿಗಳಿಗೆ ಚಿಕಿತ್ಸೆ ಆಗಬೇಕು ಎನ್ನುವ ದೃಷ್ಟಿಯಿಂದ ಆಸ್ಪತ್ರೆ ನಿರ್ಮಾಣಗೊಂಡಿದೆ.  ಗೋ ಹತ್ಯೆ ನಿಷೇಧ ಕಾಯಿದೆ ಬಂದ ಮೇಲೆ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದೇವೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ಗುಣಮಟ್ಟದ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕರ್ನಾಟಕ ಪ್ರಾಣಿ ಕಲ್ಯಾಣ ಯೋಜನೆಯಡಿ ಮನೆಬಾಗಿಲಿಗೆ ಪಶು ಚಿಕಿತ್ಸೆಗೆ ತೆರಳಲು ಪಶುಸಂಜೀವಿನಿ ವ್ಯವಸ್ಥೆ ಮಾಡಲಾಗಿದೆ. ಪ್ರಾಣಿಗಳ ರಕ್ಷಣೆಯೇ ನಮ್ಮ ಉದ್ದೇಶ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಲ್. ನಾಗೇಂದ್ರ, ನಗರ ಪಾಲಿಕೆ ಸದಸ್ಯೆ ಪ್ರಮೀಳಾಭರತ್.ಎಂ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಮಾದಪ್ಪ, (ಆಡಳಿತ)ಜಿಲ್ಲಾ ಪಶು ಆಸ್ಪತ್ರೆಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಕೆ.ಪಿ. ರವಿಕುಮಾರ್, ಸಹಾಯಕ ನಿರ್ದೇಶಕ ಡಾ. ಎಸ್.ಪಿ. ಸುರೇಶ್ ಹಾಗೂ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: