ಮೈಸೂರು

ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ಗಣಿತಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

ಮೈಸೂರು,ಫೆ.18:- ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಮೈಸೂರು ಜಿಲ್ಲಾ ಪದವಿಪೂರ್ವ ಗಣಿತಶಾಸ್ತ್ರ ಉಪನ್ಯಾಸಕರ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಗಣಿತಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಮತ್ತು ಪರಿಷ್ಕೃತ ಪಠ್ಯಕ್ರಮದ ವಿಶ್ಲೇಷಣಾ ಕಾರ್ಯಕ್ರಮವನ್ನು ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ಉದ್ಘಾಟಿಸಿದ ಮೈಸೂರು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ (ಪ್ರಭಾರ) ಉಪನಿರ್ದೇಶಕರಾದ  ನಾಗ ಮಲ್ಲೇಶ್‍  ಮಾತನಾಡಿ ಗಣಿತಶಾಸ್ತ್ರದಲ್ಲಿ ಉತ್ತಮ ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಉತ್ತಮ ಮಾರ್ಗದರ್ಶನ ಅತ್ಯಗತ್ಯ. ವಿದ್ಯಾರ್ಥಿಗಳಿಗೆ  ಉತ್ತಮ ರೀತಿಯಲ್ಲಿ ಬೋಧನೆ ಮಾಡುವುದರ ಮೂಲಕ ಅವರ ಆತ್ಮವಿಶ್ವಾಸ ವೃದ್ಧಿಗೆ ಶ್ರಮಿಸಬೇಕು. ವಿಶೇಷ ತರಗತಿಗಳು ಪರಿಹಾರ ಬೋಧನಾ ತರಗತಿಗಳನ್ನು ಮಾಡುವ ಮೊದಲು ಪೂರ್ವ ತಯಾರಿ ನಡೆಸಿ ಕ್ರಿಯಾಶೀಲರಾಗಿ ವಿದ್ಯಾರ್ಥಿಗಳ ಮನಮುಟ್ಟುವ ರೀತಿಯಲ್ಲಿ ಉತ್ತಮವಾಗಿ ಬೋಧಿಸಬೇಕು. ತನ್ಮೂಲಕ ಜಿಲ್ಲೆಯ ಫಲಿತಾಂಶವನ್ನು ಉತ್ತಮಪಡಿಸುವಲ್ಲಿ ಕಾರ್ಯತತ್ಪರರಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಜಯ ವಿಠಲ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ   ಎಚ್. ಸತ್ಯಪ್ರಸಾದ್‍  ಮಾತನಾಡಿ ವಿದ್ಯಾರ್ಥಿಗಳಲ್ಲಿ ಗಣಿತಶಾಸ್ತ್ರದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಉಪನ್ಯಾಸಕರ ಪಾತ್ರ ಹಿರಿದು. ಆದ್ದರಿಂದ ವಿದ್ಯಾರ್ಥಿಗಳು ಗಣಿತಶಾಸ್ತ್ರವನ್ನು ಕಬ್ಬಿಣದ ಕಡಲೆ ಎಂದು ಭಾವಿಸದ ರೀತಿಯಲ್ಲಿ ಆಸಕ್ತಿಯಿಂದ ಕಲಿಯುವಂತಾಗಬೇಕು ಎಂದರು.

ಹನಸೋಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ   ಉದಯಶಂಕರ್‍  ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.   ರವಿಶಂಕರ್ ನಿರೂಪಿಸಿ, ವೈಷ್ಣವಿ ಪ್ರಾರ್ಥಿಸಿದರು,   ಸೂರ್ಯ   ವಂದನಾರ್ಪಣೆ ಸಲ್ಲಿಸಿದರು.    ಟಿ.ಕೆ. ಚಂದ್ರಶೇಖರ್, ಸಂಪನ್ಮೂಲ ವ್ಯಕ್ತಿಗಳು, ಗಣಿತಶಾಸ್ತ್ರ ಉಪನ್ಯಾಸಕರು, ರಾಮಕೃಷ್ಣ ವಿದ್ಯಾಶಾಲಾ, ಮೈಸೂರು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭ  ಗಣಿತಶಾಸ್ತ್ರ ಉಪನ್ಯಾಸಕರಾದ   ಪ್ರಾಚಾರ್ಯರಾದ   ಟಿ.ಸಿ. ಸುದೀಪ್,   ಗಣಿತಶಾಸ್ತ್ರ ಉಪನ್ಯಾಸಕರಾದ   ಎನ್.ಆರ್. ರಾಜೇಶ್,   ಮಂಜೇಗೌಡ,   ಮಹದೇವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಮೈಸೂರು ಜಿಲ್ಲೆಯ 120ಕ್ಕೂ ಹೆಚ್ಚು ಉಪನ್ಯಾಸಕರು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: