ದೇಶಪ್ರಮುಖ ಸುದ್ದಿವಿದೇಶ

ಬ್ರಿಟನ್‍ನಲ್ಲಿ ವಿಜಯಮಲ್ಯ ಬಂಧನ; ಗಡೀಪಾರು ಪ್ರಕ್ರಿಯೆಗೆ ಚಾಲನೆ?

ಲಂಡನ್ : ಭಾರತದ ಹಲವು ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ಲಂಡನ್‍ನಲ್ಲಿ ವಾಸ್ತವ್ಯ ಹೂಡಿರುವ ಭಾರತದ ಉದ್ಯಮಿ ವಿಜಯ್ ಮಲ್ಯ ಅವರನ್ನು ಸ್ಕಾಟ್‍ಲಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧನದ ನಂತರ ಕೇವಲ 3 ಗಂಟೆಗಳಲ್ಲೇ ಅವರಿಗೆ ಜಾಮೀನು ದೊರೆತಿದೆ.

ಬೆಳಗ್ಗೆ 9.30ಕ್ಕೆ ಬಂಧಿಸಿದ ತರುವಾಯ ಮಲ್ಯರನ್ನು ಪೊಲೀಸರು ವೆಸ್ಟ್’ಮಿನಿಸ್ಟರ್ ಕೋರ್ಟ್‍ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಅವರನ್ನು ಗಡೀಪಾರು ಮಾಡುವ ಸಂಬಂಧ ವಿಚಾರಣೆ ಆರಂಭಿಸಿದ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದ್ದು, ವಿಚಾರಣೆಯನ್ನು ಮೇ 17ಕ್ಕೆ ಮುಂದೂಡಿದೆ.

6.5 ಲಕ್ಷ ಪೌಂಡ್ ಠೇವಣಿ ನೀಡಿ ಜಾಮೀನು ಪಡೆದ ವಿಜಯ ಮಲ್ಯ, ಸ್ವಲ್ಪ ಹೊತ್ತಿನಲ್ಲೇ ಟ್ವೀಟ್ ಮಾಡಿದ್ದು “ಬಂಧನವೇನೂ ದೊಡ್ಡ ಸುದ್ದಿ ಅಲ್ಲ. ಆದರೆ ಭಾರತ ಮಾಧ್ಯಮಗಳು ಇದನ್ನು ದೊಡ್ಡದಾಗಿ ಬಿಂಬಿಸುತ್ತಿವೆ” ಎಂದು ಹೇಳಿದ್ದಾರೆ.

ಭಾರತದಲ್ಲಿ ಮದ್ಯದ ದೊರೆ ಎಂದೇ ಖ್ಯಾತರಾಗಿರುವ ವಿಜಯ್ ಮಲ್ಯ ಅವರು ಯುನೈಟ್ ಬ್ರಿವರೀಸ್ ಮತ್ತು ಕಿಂಗ್‍ಫಿಷರ್ ಏರ್‍’ಲೈನ್ಸ್ ಮಾಲೀಕರಾಗಿದ್ದರು. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಒಡೆತನವನ್ನೂ ಸಹ ಹೊಂದಿದ್ದರು.

ನಷ್ಟದ ಕಾರಣ ನೀಡಿ ವಿಜಯ್ ಮಲ್ಯ ಅವರು ಕಿಂಗ್‍ಫಿಷರ್ ಏರ್‍’ಲೈನ್ಸ್ ಉದ್ಯೋಗಿಗಳಿಗೆ ಸಂಬಳ ನೀಡದ ಕಾರಣ ಸಾವಿರಾರು ನೌಕರರು ಸಂಕಷ್ಟಕ್ಕೆ ಸಿಲುಕಿದ್ದರು. ನಂತರ ಮಲ್ಯ, ಭಾರತದ ಹಲವಾರು ಬ್ಯಾಂಕ್‍ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ಉಪಾಯದಲ್ಲಿ ದೇಶ ತ್ಯಜಿಸಿ ಈಗ ಬ್ರಿಟನ್‍ನಲ್ಲಿ ನೆಲೆಸಿದ್ದಾರೆ.

ಭಾರತ ಮತ್ತು ಬ್ರಿಟನ್ ನಡುವೆ ಗಡಿಪಾರು ಒಪ್ಪಂದ ಏರ್ಪಟ್ಟಿಲ್ಲವಾದ ಕಾರಣ ಮಲ್ಯ ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಬ್ರಿಟನ್ ಪ್ರಧಾನಿ ಜೊತೆ ಭಾರತದ ವಿತ್ತ ಸಚಿವ ಅರುಣ್ ಜೈಟ್ಲಿ ಮಾತುಕತೆ ನಡೆಸಿದ್ದರು. ಭಾರತ ಮತ್ತು ಬ್ರಿಟನ್ ಅಧಿಕಾರಿಗಳ ನಡುವೆ ಮಲ್ಯ ಬಂಧನದ ಕುರಿತು ಹಲವು ಸುತ್ತಿನ ರಹಸ್ಯ ಮಾತುಕತೆಗಳು ಕೂಡ ನಡೆದಿದ್ದವು.

ಇದೀಗ ಮಲ್ಯ ಬಂಧನವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವುದರಿಂದ ಅವರನ್ನು ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ ಎಂದೇ ಹೇಳಬಹುದು.

(ಎನ್‍.ಬಿ.ಎನ್‍)

Leave a Reply

comments

Related Articles

error: