ಮೈಸೂರು

ಕಾಂಗ್ರೆಸ್ ಮಾಜಿ ಶಾಸಕರ ವಿರುದ್ಧ ನಗರ ಪಾಲಿಕೆ ಸದಸ್ಯ, ಸ್ವಜನ ಪಕ್ಷಪಾತದ ಆರೋಪ ಮಾಡಿ ದೂಷಣೆ

ಮೈಸೂರು,ಫೆ.18:-  ಕಾಂಗ್ರೆಸ್ ಮಾಜಿ ಶಾಸಕರ ವಿರುದ್ಧ ಮೈಸೂರು ನಗರ ಪಾಲಿಕೆ ಸದಸ್ಯ, ಸ್ವಜನ ಪಕ್ಷಪಾತದ ಆರೋಪ ಮಾಡಿ, ನಾಯಕ ಸಮುದಾಯಕ್ಕೆ ಸೇರಿರುವ ಕಾರಣ ರಾಜಕೀಯವಾಗಿ ಧಮನಿಸಲು ಮುಂದಾಗಿದ್ದಾರೆ ಎಂದು ದೂಷಿಸಲಾಗಿದೆ.

ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ವಿರುದ್ಧ ಪಾಲಿಕೆ ಕಾಂಗ್ರೆಸ್ ಸದಸ್ಯ ಲೋಕೇಶ್ ವಿ.ಪಿಯಾ ಆರೋಪ ಮಾಡಿದ್ದಾರೆ. ಅವರ ಮಾಧ್ಯಮ ಹೇಳಿಕೆಯ ವಿವರದಲ್ಲಿ   ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಬೆಳೆಸದೆ, ಅವರ ಧಮನಕ್ಕೆ ಮಾಜಿ ಶಾಸಕ ಸೋಮಶೇಖರ್ ಮುಂದಾಗಿದ್ದಾರೆ. ಅವರ ಈ ವರ್ತನೆ ಇದೇ ರೀತಿ ಮುಂದುವರಿದಲ್ಲಿ ಪಕ್ಷದಲ್ಲಿನ ನಿಷ್ಠಾವಂತರು ನೆಲೆ ಕಳೆದುಕೊಳ್ಳುವ ಅಪಾಯವಿದೆ. ವಾಲ್ಮೀಕಿ ನಾಯಕ ಸಮುದಾಯಕ್ಕೆ ಸೇರಿದ ಮೈಸೂರು ನಗರ ಪಾಲಿಕೆಯ ಕಾಂಗ್ರೆಸ್ ಪಕ್ಷದ ಸದಸ್ಯರ ಪೈಕಿ ನಾನೇ ಏಕೈಕ ಸದಸ್ಯ. ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ವಿವಿಧ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷ ನಿಷ್ಠೆ ಪ್ರದರ್ಶಿಸಿರುವೆ. ಇದನ್ನು ಮನಗಂಡು ಮಾಜಿ ಮುಖ್ಯಮಂತ್ರಿ , ಅಹಿಂದ ನಾಯಕರಾದ ಸಿದ್ದರಾಮಯ್ಯ ಅವರು ನನಗೆ ನಗರ ಪಾಲಿಕೆಯ ಟಿಕೆಟ್ ನೀಡಿ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಅವರ ಆರ್ಶೀವಾದದ ಫಲವಾಗಿ ನಾನು ನನ್ನ ಮೊದಲ ಯತ್ನದಲ್ಲೇ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಬಳಿಕ ವಾರ್ಡಿನ ಜನರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುವ ಮೂಲಕ ಜನ ಮನ್ನಣೆಗಳಿಸಿರುವೆ. ಆದರೆ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಾಯಕ ಜನಾಂಗದ ನನ್ನ ಅಭಿವೃದ್ಧಿಗೆ ಅಡ್ಡಗಾಲಾಗಿದ್ದಾರೆ. ರಾಜಕೀಯವಾಗಿ ತುಳಿಯಲು ಪಟ್ಟು ಹಿಡಿದಿದ್ದಾರೆ. ಹಿಂಬಾಲಕ ಪಟಲಾಂಗಳಿಗಾಗಿ ನನ್ನಂತ ಅನೇಕ ನಿಷ್ಠಾವಂತರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ.
ರಾಜಕೀಯವಾಗಿ ಬೆಳೆಯಲು ನನಗೆ ಹಲವಾರು ಅವಕಾಶಗಳಿದ್ದರೂ ಎಂ.ಕೆ.ಸೋಮಶೇಖರ್, ಕುತಂತ್ರದಿಂದ ಅದು ಈಡೇರಲಿಲ್ಲ. ಪಕ್ಷದ ನಿಷ್ಠಾವಂತರಿಗೆ ಸಿಗಬೇಕಾದ ಅವಕಾಶಗಳು, ಕುಟುಂಬದವರ ಪಾಲಾಗಿದೆ. ಶಾಸಕರಾಗಿದ್ದ ವೇಳೆ ಇವರು ಕೆ.ಎಸ್.ಐಸಿ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದರು. ಈ ಹುದ್ದೆಯನ್ನು ಕಾರ್ಯಕರ್ತರಿಗೆ ಬಿಟ್ಟುಕೊಡಬಹುದಾಗಿತ್ತು. ಆದರೆ ಅಷ್ಟು ದೊಡ್ಡತನ ಪ್ರದರ್ಶಿಸದೆ, ಅಧಿಕಾರದ ದುರಾಸೆಯಿಂದ ಕಾರ್ಯಕರ್ತರನ್ನು ಬೆಳೆಯಲು ಬಿಡದೆ ತಾವೇ ಎಲ್ಲಾ ಸವಲತ್ತುಗಳನ್ನು ಅನುಭವಿಸಿದರು.

ಎಂ.ಕೆ.ಸೋಮಶೇಖರ್ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರದ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದ ಎಂ.ಸಿ.ಚಿಕ್ಕಣ್ಣ ಅವರನ್ನು ಓಲೈಸುವ ಸಲುವಾಗಿ ಕಳೆದ ಬಾರಿ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದರು. ಕಡೆಗೆ ಕುತಂತ್ರದಿಂದ ಚಿಕ್ಕಣ್ಣ ಅವರನ್ನು ಸೋಲಿಸುವ ಮೂಲಕ ರಾಜಕೀಯವಾಗಿ ಅವರನ್ನು ಮುಗಿಸಿದರು.

ಇದೀಗ, ನಾಯಕ ಜನಾಂಗದವರಿಗೆ ಯಾವುದೇ ರಾಜಕೀಯ ಅವಕಾಶಗಳು ಲಭಿಸಬಾರದು. ಅವರು ಮುಂದೆ ಬರಬಾರದು ಎಂಬುದು ಸೋಮಶೇಖರ್ ದುರುದ್ದೇಶ. ಈ ಕಾರಣಕ್ಕಾಗಿಯೇ ನನಗೆ ಲಭಿಸಬೇಕಾಗಿದ್ದ ಹಲವಾರು ಅವಕಾಶಗಳಿಗೆ, ನಾನು ನಾಯಕ ಜನಾಂಗದವನು ಎಂಬ ಏಕೈಕ ಕಾರಣದಿಂದ ಅಡ್ಡಗಾಲು ಹಾಕಿದ್ದಾರೆ. ಮುಡಾ ಸದಸ್ಯರಾಗಿ ನೇಮಿಸುವ ಅವಕಾಶವಿದ್ದರೂ, ಸೋಮಶೇಖರ್ ಅಲ್ಲೂ ಅಡ್ಡಗಾಲು ಹಾಕಿ ಸಣ್ಣತನ ಪ್ರದರ್ಶಿಸುತ್ತಿದ್ದಾರೆ. ಅವರ ವರ್ತನೆ ಬದಲಾಗದಿದ್ದಲ್ಲಿ ಪಕ್ಷದ ವರಿಷ್ಠರಿಗೆ ದೂರು ನೀಡುವುದು ಅನಿವಾರ್ಯ ಎಂದು ಕಾರ್ಪೋರೇಟರ್ ಲೋಕೇಶ್ ವಿ.ಪಿಯಾ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: