ಮೈಸೂರು

ಫೆ. 21 : `ಪರ್ವ ವಿರಾಟ ದರ್ಶನ’

ಮೈಸೂರು.ಫೆ .18 :- ಮೈಸೂರು ರಂಗಾಯಣ ಮತ್ತು ಡಾ.ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ 21-02-2021 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ `ಪರ್ವ’ ನಾಟಕದ ಮುನ್ನುಡಿಯಾಗಿ `ಪರ್ವ ವಿರಾಟ್ ದರ್ಶನ’ ಎಂಬ ವಿಚಾರ ಸಂಕಿರಣ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ನಡೆಯಲಿದೆ.
ಈ ವಿಚಾರ ಸಂಕಿರಣವನ್ನು ನಾಡಿನ ಖ್ಯಾತ ಸಾಹಿತಿಗಳು, ರಾಷ್ಟ್ರೋಜ, ಪದ್ಮಶ್ರೀ ಡಾ.ಎಸ್.ಎಲ್. ಭೈರಪ್ಪನವರು ಉದ್ಘಾಟಿಸಲಿದ್ದಾರೆ. ಇವರು 42 ವರ್ಷಗಳ ಹಿಂದೆ ರಚಿಸಿರುವ ಶ್ರೇಷ್ಠ ಕಾದಂಬರಿ `ಪರ್ವ’ ಪ್ರಧಾನಮಂತ್ರಿಗಳ ಆಶಯದಂತೆ ಶೃಂಗಸಭೆಯಲ್ಲಿ ಘೋಷಣೆ ಮಾಡಿರುವಂತೆ ರಷ್ಯನ್ ಮತ್ತು ಮ್ಯಾಂಡರಿನ್ (ಚೀನಾ) ಭಾಷೆಯಲ್ಲಿ ಅನುವಾದಗೊಂಡಿದ್ದು, ಈ ಎರಡು ಕೃತಿಗಳನ್ನು ಖ್ಯಾತ ಸಾಹಿತಿ,ವಿಮರ್ಶಕ, ವಾಗ್ಮಿ ಶತಾವಧಾನಿ ಡಾ. ಆರ್. ಗಣೇಶ್ ಬಿಡುಗಡೆ ಮಾಡಲಿದ್ದಾರೆ.
20 ನಿಮಿಷಗಳ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ `ಪರ್ವ’ ಕಾದಂಬರಿಯನ್ನು ಖ್ಯಾತ ರಂಗನಿರ್ದೇಶಕ ಪ್ರಕಾಶ್ ಬೆಳವಾಡಿ ರಂಗಪಠ್ಯವನ್ನಾಗಿಸಿ ರಂಗಾಯಣಕ್ಕಾಗಿ ನಿರ್ದೇಶನ ಮಾಡಿದ್ದು, ಇದರ ವಿಶೇಷ ಪ್ರದರ್ಶನ 2021 ಮಾರ್ಚ್ 12, 13 ಮತ್ತು 14 ರಂದು ಕಲಾಮಂದಿರದಲ್ಲಿ ನಡೆಯಲಿದ್ದು, ಇದರ ಟಿಕೆಟ್‌ಅನ್ನು ಸಾಹಿತಿ ಭೈರಪ್ಪನವರು ಬಿಡುಗಡೆ ಮಾಡಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ಬೆಳಗ್ಗೆ 10.30ಕ್ಕೆ ಶತಾವಧಾನಿ ಡಾ. ಆರ್. ಗಣೇಶ್ ಅವರು `ಪರ್ವ ವಿರಾಟ್ ದರ್ಶನ’ದ ಉಪನ್ಯಾಸನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪನವರು `ರಂಗಾಯಣ ಮತ್ತು ಪರ್ವ ರಂಗಪ್ರಸ್ತುತಿ’ಯ ಪ್ರಸ್ತಾವನೆ ಮಂಡಿಸಲಿದ್ದಾರೆ. `ಪರ್ವ’ ನಾಟಕದ ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು `ಪರ್ವ ಚಿಗೊರೊಡೆದ ಬಗೆ’ ತಮ್ಮ ವಿಚಾರವನ್ನು ಮಂಡಿಸಲಿದ್ದಾರೆ. ಇದರ ನಂತರ ಡಾ. ಎಸ್.ಎಲ್. ಭೈರಪ್ಪನವರು `ಪರ್ವ ನಾಲ್ಕು ದಶಕದ ನೆನಪು’ ಕುರಿತು ತಮ್ಮ ಅನಿಸಿಕೆಗಳನ್ನು ಸಾಹಿತ್ಯ ಮತ್ತು ರಂಗಾಸಕ್ತರ ಮುಂದಿಡಲಿದ್ದಾರೆ. ಡಾ. ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ. ಜಿ.ಎಲ್. ಶೇಖರ್ ಅವರು ಸ್ವಾಗತಿಸಲಿದ್ದು,ರಂಗಾಯಣದ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅವರು ವಂದಿಸಲಿದ್ದಾರೆ.
ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಈಗಾಗಲೇ 600 ಜನ ಸಾಹಿತ್ಯ ಮತ್ತು ರಂಗಾಸಕ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ್ ಅವರು ಮಧ್ಯಾಹ್ನದ ಕಾರ್ಯ ನಿಮಿತ್ತ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಸಾಹಿತ್ಯ ಪ್ರತಿಷ್ಠಾನ ಭಾಗವಹಿಸುವ ಎಲ್ಲರಿಗೆ ಚಹಾ ವ್ಯವಸ್ಥೆಯನ್ನು ಮಾಡಿದ್ದು, ಇಡೀ ಕಾರ್ಯಕ್ರಮ ನಿಗದಿತ ಸಮಯಕ್ಕೆ ಮತ್ತು ಅತ್ಯಂತ ಶಿಸ್ತಿನಿಂದ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್-19 ರ ನಿಯಮದಂತೆ ಭಾಗವಹಿಸುವ ಎಲ್ಲರೂ ಮಾಸ್ಕ್ ಧರಿಸಿ ಬರುವಂತೆ ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ ಕಾರ್ಯಪ್ಪನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: