ಮೈಸೂರು

ಏ. 29: ಬಸವ ಜಯಂತಿ ಆಚರಣೆ ಸಿದ್ಧತೆಗೆ ಸೂಚನೆ

ಮೈಸೂರು ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಗಜ್ಯೋತಿ ಬಸವಣ್ಣ ಅವರ ಜನ್ಮಾದಿನಾಚರಣೆಯನ್ನು ಏಪ್ರಿಲ್ 29 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಮೈಸೂರು ಉಪವಿಭಾಗಾಧಿಕಾರಿ ಸಿ.ಎಲ್. ಆನಂದ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬಸವಜಯಂತಿ ಆಚರಣೆ ಸಂಬಂಧ ಹಮ್ಮಿಕೊಳ್ಳಲಾದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಸವ ಜಯಂತೋತ್ಸವದ ಅಂಗವಾಗಿ ಏಪ್ರಿಲ್ 29 ರಂದು ಬೆಳಿಗ್ಗೆ 9-30 ಕ್ಕೆ ನಗರದ  ಶ್ರೀದೇಶಿಕೇಂದ್ರ ಸ್ವಾಮೀಜಿ ವೃತ್ತದಲ್ಲಿರುವ ಬಸವಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಬೆಳಿಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವೇದಿಕೆ ಕಾರ್ಯಕ್ರಮ ಪ್ರಾರಂಭವಾಗುವುದಕ್ಕೂ ಮುನ್ನ ಬೆಳಿಗ್ಗೆ 10 ಗಂಟೆಯಿಂದ ವಚನ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಇದೇ ವೇಳೆ ಮಾತನಾಡಿದ ಬಸವ ಒಕ್ಕೂಟಗಳ ಸಮಿತಿಯ ಲೋಕೇಶ್ ಅವರು ಒಕ್ಕೂಟದ ವತಿಯಿಂದ ಈ ಬಾರಿ ಏಪ್ರಿಲ್ 28 ರಂದು ಸಂಜೆ 5 ಗಂಟೆಗೆ ಬಸವಣ್ಣನವರ ಪುತ್ಥಳಿ ಮುಂಭಾಗದಿಂದ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ ಸಹ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ವಿವಿಧ ಕಲಾತಂಡವನ್ನು ಮೆರವಣಿಗೆ ನಿಯೋಜಿಸಿಕೊಡುವಂತೆ ಮನವಿ ಮಾಡಿದರು.
ಒಕ್ಕೂಟವು ಈಗಾಗಲೇ ಜ್ಞಾನಪೀಠ ಪ್ರಶಸ್ತಿ ವಿಜೇತ ಚಂದ್ರಶೇಖರ ಕಂಬಾರರನ್ನು ಬಸವ ಜಯಂತಿಗೆ ಉಪನ್ಯಾಸ ನೀಡಲು ಆಹ್ವಾನಿಸಿದೆ ಅವರು ಒಪ್ಪಿಗೆ ನೀಡಬೇಕಿದ್ದು, ಜಿಲ್ಲಾಡಳಿತ ವತಿಯಿಂದ ಸಹ ಅವರನ್ನು ಆಹ್ವಾನಿಸುವಂತೆ ತಿಳಿಸಿದರು. ಚಂದ್ರಶೇಖರ ಕಂಬಾರರನ್ನು ಆಹ್ವಾನಿಸಲು ಸಭೆಯಲ್ಲಿ ಎಲ್ಲರೂ ಒಮ್ಮತದಿಂದ ಒಪ್ಪಿಗೆ ನೀಡಿದರು.
ಮೈಸೂರು ಮಹಾನಗರಪಾಲಿಕೆ ವತಿಯಿಂದ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಸ್ಥಳ ಹಾಗೂ ಕಲಾಮಂದಿರದ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸುವುದರ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮೈಸೂರು ಉಪವಿಭಾಗಾಧಿಕಾರಿಗಳು ತಿಳಿಸಿದರು.
ಅಧಿಕಾರಿ/ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಬಸವ ಜಯಂತಿಯಲ್ಲಿ ಭಾಗವಹಿಸುವಂತೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸವಿತಾ, ಸಂಘ ಸಂಸ್ಥೆಗಳ ಮುಖ್ಯಸ್ಥರಾದ ತಾಯೂರು ವಿಠಲ್‍ಮೂರ್ತಿ, ವೇಣುಗೋಪಾಲ್, ರವಿಶಂಕರ್ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: